12ನೇ ಶತಮಾನವು ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ಪವಿತ್ರ ಭೂಮಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮ ನಡೆಯುತ್ತಿರುವುದು ಐತಿಹಾಸಿಕ ಸಂಗತಿ.

ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಶರಣ ಕಮ್ಮಟಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ ಸಂಪೂರ್ಣವಾಗಿ ಶರಣ ಕಮ್ಮಟಗಳು ನಿಂತಿದ್ದವು. ಮತ್ತೆ 21ನೇ ಶತಮಾನದಲ್ಲಿ
ಶರಣ ವಿಜಯೋತ್ಸವ ನಾಡಹಬ್ಬ ಆಚರಣೆ ಮೂಲಕ ಶರಣ ಕಮ್ಮಟಗಳು ಪ್ರಾರಂಭವಾಗಿವೆ. ಈ ವಿಜಯೋತ್ಸವ ನಾಡಹಬ್ಬವು ಹರಳಯ್ಯನವರ ಗವಿ ಮುಖ್ಯಸ್ಥರು, ಬಸವ ತತ್ವ ಪ್ರವಚನಕಾರರಾದ ಪೂಜ್ಯ ಡಾಕ್ಟರ್ ಗಂಗಾಂಬಿಕೆ ಅಕ್ಕನವರ ಘನ ನೇತೃತ್ವದಲ್ಲಿ ಸಾಗಿ ಬರಲಿದೆ. ಅಚ್ಚುಕಟ್ಟಾದ ಕಾರ್ಯಕ್ರಮದ ವ್ಯವಸ್ಥೆ ಅಷ್ಟೇ ಅರ್ಥಪೂರ್ಣವಾದ ವಿಚಾರ ಗೋಷ್ಠಿಗಳು ಆಯೋಜಿಸಿದ್ದಾರೆ. ಈ ಮೂಲಕ ಬಸವ ತತ್ವವನ್ನು ಸಾಗರದಾಚೆಗೂ ಪಸರಿಸಬೇಕೆಂಬ ಮಾಹಾದಾಸೆಯನ್ನು ಹೊತ್ತುಕೊಂಡು ಸದ್ದುಗದ್ದಲವಿಲ್ಲದೆ ಶರಣ ತತ್ವ ಸೇವಾ ಕಾರ್ಯಗಳು ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದು ಹೆಮ್ಮೆಯ ಪಡುವ ವಿಚಾರವಾಗಿದೆ.

ಪೂಜ್ಯ ಡಾ.ಗಂಗಾಂಬಿಕೆ ಅಕ್ಕನವರ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮವು ಬಸವಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಸಾಮಾಜಿಕ,ಜನಪರ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿನಿತ್ಯ ಮಾಡಿಕೊಂಡು ಬರುತ್ತಿರುವ ಅಕ್ಕ. ಅಕ್ಕನವರ ನಿಸ್ವಾರ್ಥ ಸೇವಾ ಕೈಂಕರ್ಯಗಳ ಸಾಲಿನಲ್ಲಿ ನಿಲ್ಲುವ ಕಾರ್ಯಕ್ರಮವೇ ಶರಣ ವಿಜಯೋತ್ಸವ ನಾಡಹಬ್ಬ ಎಂದರೆ ಅಶೋಕ್ತಿಯಂತೂ ಖಂಡಿತ ಅಲ್ಲವೇ ಅಲ್ಲ. ಹಾಗಾಗಿ ಅಕ್ಕನವರ ನೇತೃತ್ವದಲ್ಲಿ ಇಂತಹ ಅದ್ಭುತವಾದಂತಹ ವೈಚಾರಿಕ ಕಾರ್ಯಕ್ರಮ ಸಾಗಿ ಬರುತ್ತಿರುವುದು ಬಸವ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ.
ಕ್ಷಣಗಣನೆ ಆರಂಭ: ಮನುಕುಲದ ಉದ್ಧಾರಕ,ಸತ್ಯ ತತ್ವದ ಪ್ರತಿಪಾದಕ,ಶರಣ ಗಣಮೇಳದ ರೂವಾರಿ ಅಣ್ಣ ಬಸವಣ್ಣನವರು ಹಾಗೂ ಶರಣರು ಮೆಟ್ಟಿದ ಧರೆ ಪಾವನ ಭೂಮಿ ಬಸವಕಲ್ಯಾಣದ ಭವ್ಯವಾದ ಹರಳಯ್ಯನವರ ಗವಿ ಮಹಾಮನೆಯ ಆವರಣದಲ್ಲಿ ವಿಜಯೋತ್ಸವ ನಾಡಹಬ್ಬ
ಕಾರ್ಯಕ್ರಮ ಕ್ಷಣಗಣನೆ ಆರಂಭಕ್ಕೆ ಸಾಕ್ಷಿಯಾಗಲಿದೆ.
ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಿ ಅ.02 ವರೆಗೆ ನಿರಂತರವಾಗಿ ಸಾಗಿ ಬರಲಿದೆ. ಈ
ಹತ್ತು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧ, ಅರ್ಥಪೂರ್ಣ, ವೈಜ್ಞಾನಿಕ, ವೈಚಾರಿಕತೆ ಮೌಲ್ಯಾಧಾರಿತ
ಬಸವ ತತ್ವ ಸಿದ್ಧಾಂತದ ಮೇಲೆ ನಾಡಹಬ್ಬ ಜರುಗಲಿದೆ. ಶರಣ ವಿಜಯೋತ್ಸವ ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮೊದಲಾದ ಭಾಗಗಳಿಂದ ಸಾವಿರಾರು ಶರಣ ಬಂಧುಗಳು ಭಾವಹಿಸಲಿದ್ದಾರೆ.
ಹತ್ತು ದಿವಸಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶರಣ ವಿಜಯೋತ್ಸವ ಆರಂಭೋತ್ಸವ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡುವದರೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದೆ.
ಮಕ್ಕಳ ಸಮಾವೇಶ.ಮಾಹಾಶಕ್ತಿಕೂಟಗಳ ಸಮಾವೇಶ.
ಮಾಚಿದೇವ – ಮಲ್ಲಿಬೊಮ್ಮ ವೀರ ಸೈನಿಕರ ವೇದಿಕೆ ಸಮಾವೇಶ. ಹಿರಿಯ ನಾಗರಿಕರ ಸಮಾವೇಶ. ಯುವ ಸಮಾವೇಶ ಉಪನ್ಯಾಸ ಮತ್ತು ಸಂವಾದ, ಸೂತ್ರದ ಗೊಂಬೆಯಾಟ ಕಾರ್ಯಕ್ರಮ.ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶ. ಮರೆತು ಹೋದ ವಿಜಯನಗರ ಮಾಹಾಸಾಮ್ರಾಜ್ಯ ಸಮಾವೇಶ. ಬಸವ ಬೆಳಕು ಸಮಾವೇಶ.ಮೊದಲಾದ ಸಮಾವೇಶಗಳು ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಈ ಬಾರಿ ಅಂದರೆ 2025ನೇ ಸಾಲಿನ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರಕ್ಕೆ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಆಯ್ಕೆ ಆಗಿರುತ್ತಾರೆ.
ಇದರಂತೆ ಶರಣ ವಿಜಯ ವಚನ ಪಠಣ ಕೊನೆಯದಾಗಿ ಹುತಾತ್ಮ ಶರಣರ ಎಳೆಹೊಟ್ಟೆಯ ಮೆರವಣಿಗೆ ಇದು ಬಸವಕಲ್ಯಾಣದ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗಿ ಹರಳಯ್ಯನವರ ಗವಿಯವರೆಗೆ ಸಾಗಿ ಬರಲಿರುವ ಮೆರವಣಿಗೆಯಾಗಲಿದೆ. ಈ ಮೆರವಣಿಗೆಯಲ್ಲಿ ಸಾವಿರಾರು ಬಸವ ಅಭಿಮಾನಿಗಳು, ಕಲಾತಂಡಗಳು, ಜನಪದ ಕಲಾವಿದರು, ವಚನ ಗಾಯಕರು, ಸ್ವಾಮೀಜಿಗಳು ,ಬಸವ
ತತ್ವ ನಿಷ್ಠರು ಪಾಲ್ಗೊಂಡು ನಾಡಹಬ್ಬ ವಿಜಯೋತ್ಸವವನ್ನು ಯಶಸ್ವಿಗೊಳಿಸಲಿದ್ದಾರೆ. ಪ್ರತಿದಿನ ಮುಂಜಾನೆ 8 ಗಂಟೆಗೆ ಇಷ್ಟಲಿಂಗ ಪೂಜಾಯೋಗ ಪ್ರಭುಲಿಂಗಲೀಲೆ ಪ್ರವಚನ ಜರುಗಲಿದೆ.
ಹೀಗೆ ಈ ಹತ್ತು
ದಿನಗಳ ಕಾಲ ಇಷ್ಟಲಿಂಗ ಪೂಜೆ, ಪ್ರಾರ್ಥನೆ,ಶರಣ ಸ್ಮರಣೆ, ಧರ್ಮಚಿಂತನೆ,ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ,ಪಥ ಸಂಚಲನ ಮುಂತಾದ ಕಾರ್ಯಕ್ರಮಗಳು ಜರುಗಿ, ಜನಮಾನಸದಲ್ಲಿ ಚಿರಕಾಲ ಉಳಿಯಲಿದೆ. ಅಂದಹಾಗೆ ಬಂಧುಗಳೇ, ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಮತ್ತು ಲಿಂಗವಂತ ಹರಳಯ್ಯ ಪೀಠ ಬಸವಕಲ್ಯಾಣ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಈ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮವು ಬಸವಾದಿ ಶರಣರ ಸಂದೇಶಗಳನ್ನು ಹೊತ್ತು ನಾಡಿನ ಉದ್ಧಕ್ಕೂ ಪಸರಿಸುವ ಕಾರ್ಯ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ.
ಅದಕ್ಕಾಗಿ ಬಸವಕಲ್ಯಾಣ ಕ್ಷೇತ್ರ ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದು, ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಜಗತ್ತಿನ ಜನ, ಮತ್ತೆ ಕಲ್ಯಾಣಕ್ಕೆ ಬಂದು ನೋಡುವಂತಾಗಿದೆ. ಮಹಾ ಮಾನವತಾವಾದಿ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ ಸಮಸ್ತ ಬಸವಭಕ್ತರು, ಬಸವ ತತ್ವಾಭಿಮಾನಿಗಳೆಲ್ಲರೂ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮಕ್ಕೆ ಬಂದು ಧನ್ಯರಾಗಬೇಕಾಗಿದೆ.
ಕೊನೆಯದಾಗಿ – ಈ ಶರಣ ವಿಜಯೋತ್ಸವ ಸಮಾರಂಭಕ್ಕೆ ಜಾತಿ ಮತ ಪಂಥಗಳ ಭೇದವಿಲ್ಲದೆ, ಸರ್ವರಿಗೂ ಆದರದ ಸ್ವಾಗತವಿದೆ.

ಲೇಖಕರು – ಸಂಗಮೇಶ ಎನ್ ಜವಾದಿ
ಸಾಹಿತಿ,ಪತ್ರಕರ್ತ, ಪ್ರಗತಿಪರ ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು,
ಬೀದರ ಜಿಲ್ಲೆ.




