ಹಾಸನ: ಕೋಟ್ಯಂತರ ರೂಪಾಯಿ ಇನ್ಶೂರೆನ್ಸ್ ಹಣಕ್ಕಾಗಿ ದಂಪತಿಗಳು ಖತರ್ನಾಕ್ ಪ್ಲಾನ್ ಮಾಡಿ ಅಮಾಯಕನನ್ನೇ ಹತ್ಯೆಗೈದು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ.ಅಮಾಯಕ ವ್ಯಕ್ತಿಯನ್ನು ಕೊಲೆಮಾಡಿದ್ದ ದಂಪತಿ ಅಪಘಾತದಲ್ಲಿ ಸಾವು ಎಂದು ಕಥೆ ಕಟ್ಟಿದ್ದರು.
ಆಗಸ್ಟ್ 12ರಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಸ್ಥಳದಲ್ಲಿದ್ದ ಕಾರಿನ ಆಧಾರದ ಮೇಲೆ ಮೃತ ವ್ಯಕ್ತಿಯ ಬಗ್ಗೆ ಪೊಲೀಸರು ಪತ್ತೆ ಮಾಡಿದ್ದರು.
ಆ.13ರಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬ ಮಹಿಳೆ ಈ ಶವ ತನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರಿಟ್ಟಿದ್ದರು. ಆದರೆ ಮೃತ ವ್ಯಕ್ತಿಯ ಕತ್ತಿನಲ್ಲಿದ್ದ ಗಾಯದ ಬಗ್ಗೆ ಅನುಮಾನಗೊಂಡ ಗಂಡಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಮತ್ತೊಂದೆಡೆ ಹೊಸಪೇಟೆಯ ಚಿಕ್ಕಕೋಲಿಗ ಗ್ರಾಮದಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು.
ಹೊಸಕೋಟೆಯಲ್ಲಿ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿಸ್ವಾಮಿಗೌಡ ಸಾಕಷ್ಟು ಸಾಲ ಮಾಡಿದ್ದ. ಈ ಸಾಲ ತೀರಿಸಲು ದಂಪತಿ ಇನ್ಶೂರೆನ್ಸ್ ಹಣಕ್ಕಾಗಿ ಖತರ್ನಾಕ್ ಪ್ಲಾನ್ ಮಾಡಿದ್ದಾರೆ.
ಮುನಿಸ್ವಾಮಿಗೌಡ ನನ್ನೇ ಹೋಲುವ ವ್ಯಕ್ತಿಯನ್ನು ಹುಡುಕಿ ತಂದು ಗೊಲ್ಲರಹೊಸಹಳ್ಳಿ ಬಳಿ ವ್ಯಕ್ತಿಯನ್ನು ಹತ್ಯೆಗೈದು ಬಳಿಕ ಲಾರಿ ಡಿಕಿಯಾಗಿ ಅಪಘಾತದಲ್ಲಿ ವ್ಯಕ್ತಿ ಸಾವು ಎಂದು ಬಿಂಬಿಸಿದ್ದಾರೆ.
ಘಟನೆ ಬಳಿಕ ಮುನಿಸ್ವಾಮಿ ತಲೆಅರೆಸಿಕೊಂಡಿದ್ದ. ಇತ್ತ ಪತ್ನಿ ತಾನು ಪತಿ ಕಳೆದುಕೊಂಡಿದ್ದಾಗಿ ನಾಟಕ ಮುಂದುವರೆಸಿದ್ದಳು. ಮುಂದೆ ಏನು ಮಾಡಬೇಕು ಎಂಬುದೂ ತೋಚದೆ ಗೊಂದಲದಲ್ಲಿದ್ದ ಮುನಿಸ್ವಾಮಿಗೌಡ ತನ್ನ ಸಂಬಂಧಿ ಇನ್ಸ್ ಪೆಕ್ಟರ್ ಓರ್ವರ ಮುಂದೆ ಪ್ರತ್ಯಕ್ಷನಾಗಿದ್ದ. ಘಟನೆ ವಿವರಿಸಿ ರಕ್ಷಣೆ ಕೊಡುವಂತೆ ಕೇಳಿದ್ದ. ಮುನಿಸ್ವಾಮಿ ಮಾಹಿತಿ ಪಡೆದು ಅವರು ಗಂಡಸಿ ಠಾಣೆ ಪೊಲೀಸರಿಗೆ ತಿಳಿಸಿದ್ದರು. ಶಿಡ್ಲಘಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಕರ್ತವ್ಯ ಪ್ರಜ್ಞೆ ನಿಷ್ಠಾವಂತಿಕೆಯಿಂದ ಇದೀಗ ದಂಪತಿಯನ್ನು ಬಂಧಿಸಲಾಗಿದೆ.