ಕಲಬುರಗಿ: ಮಹಾಶಿವರಾತ್ರಿ ಸಮೀಪಿಸುತ್ತಿದ್ದಂತೆಯೇ ಕಲಬುರಗಿಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಹಿಂದೂ ಸಂಘಟನೆಗಳು ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಕೋರ್ಟ್, ಫೆ.26 ರಂದು ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ 15 ಹಿಂದೂ ಮುಖಂಡರಿಗೆ ಮಾತ್ರ ಶಿವಲಿಂಗ ಪೂಜೆ ನೆರವೇರಿಸಲು ಅವಕಾಶ ನೀಡಿದೆ.
ಆರ್ಜಿದಾರ ಸಿದ್ರಾಮಯ್ಯ ಹಿರೇಮಠ ಸೇರಿ 15 ಜನರಿಗೆ ಅವಕಾಶ ನೀಡಲಾಗಿದ್ದು, 15 ಜನರ ಆಧಾರ್ ಕಾರ್ಡ್ ನೀಡಬೇಕು. ಜಿಲ್ಲಾಡಳಿತಕ್ಕೆ ಮೊದಲೇ 15 ಮಂದಿಯ ಲಿಸ್ಟ್ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.




