ಚಾಮರಾಜನಗರ:ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಇಬ್ಬರು ವ್ಯಕ್ತಿಗಳು ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ಬಳಿ ನಡೆದಿದೆ.
ಹಲ್ಲೆ ಮಾಡಿದ ಆರೋಪಿಗಳಾದ ಇರಸವಾಡಿ ಗ್ರಾಮದ ಕೃಷ್ಣಶೆಟ್ಟಿ ಮತ್ತು ಪುಟ್ಟಸ್ವಾಮಿಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾಗಿರುವ ಸಾರಿಗೆ ಸಂಸ್ಥೆ ಬಸ್ ಚಾಲಕ ವಿಜಯಕುಮಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ : ಚಾಮರಾಜನಗರದಿಂದ, ಆಲೂರು, ಕಾಗಲವಾಡಿ, ಹೊಂಗನೂರು, ಇರಸ ವಾಡಿ ಮಾರ್ಗವಾಗಿ ಯಳಂದೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರು ಇದ್ದರು. ಹೀಗಾಗಿ, ಚಾಲಕ ಇರಸವಾಡಿ ಗ್ರಾಮದಲ್ಲಿ ಬಸ್ ನಿಲ್ಲಿಸದೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಕೃಷ್ಣಶೆಟ್ಟಿ ಹಾಗೂ ಪುಟ್ಟಸ್ವಾಮಿಶೆಟ್ಟಿ ಅವರು ಬಸ್ ಅನ್ನು ಹಿಂಬಾಲಿಸಿಕೊಂಡು ಹೋಗಿ ಯಳಂದೂರು ಕಮನ್ ಗೇಟ್ ಬಳಿ ಬಸ್ ತಡೆದು ಚಾಲಕನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಯಳಂದೂರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಕೃಷ್ಣಶೆಟ್ಟಿ ಹಾಗೂ ಪುಟ್ಟಸ್ವಾಮಿಶೆಟ್ಟಿಯನ್ನು ಹಿಡಿದುಕೊಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಸ್ವಾಮಿ ಬಳೇಪೇಟೆ