128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಮತ್ತೆ ಸೇರ್ಪಡೆಗೊಂಡಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೂಡ ಆಯೋಜಿಲಾಗುತ್ತಿದೆ. ಟಿ20 ಸ್ವರೂಪದಲ್ಲಿ ಕ್ರಿಕೆಟ್ ಆಯೋಜಿಸಲು ನಿರ್ಧರಿಸುವ ಸಾಧ್ಯತೆ ಇದ್ದು, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಕ್ರಿಕೆಟ್ ಸ್ಪರ್ಧೆ ನಡೆಯಲಿವೆ.
ಆದರೆ, ಇದರಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತವೆ ಎಂಬುದರ ಆಯೋಜಕರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಮಾತ್ರ ಭಾಗವಹಿಸಲು ಅವಕಾಶ ಇರಲಿದೆ ಎಂದು ತಿಳಿಸಲಾಗಿದೆ. ಆದಾಗ್ಯೂ, ಒಲಿಂಪಿಕ್ಸ್ ಆಯೋಜಿಸುತ್ತಿರುವ ಅಮೆರಿಕ ಕೂಡ ಒಲಿಂಪಿಕ್ಸ್ಗೆ ನೇರ ಪ್ರವೇಶ ಪಡೆಯುವ ಅವಕಾಶವನ್ನು ಹೊಂದಿರುವ ಸಾಧ್ಯತೆ ಇದೆ. ಆದರೆ ಅರ್ಹತಾ ಪ್ರಕ್ರಿಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ.
ಒಂದು ವೇಳೆ ಅಮೆರಿಕಾ ಕ್ರಿಕೆಟ್ ತಂಡ ನೇರ ಅರ್ಹತೆ ಪಡೆದರೆ ಉಳಿದ ಐದು ತಂಡಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಸದ್ಯ ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗಿಂತ 100ಕ್ಕೂ ಹೆಚ್ಚಿನ ದೇಶಗಳು ಟಿ20 ಸ್ವರೂಪದಲ್ಲಿ ಕ್ರಿಕೆಟ್ ಆಡುತ್ತಿವೆ. ಹಾಗಾಗಿ ಅಂತಿಮ ತಂಡಗಳ ಆಯ್ಕೆ ದೊಡ್ಡ ಸವಲಾಗಿರಲಿದೆ.
ಒಲಿಂಪಿಕ್ಸ್ ಆಯ್ಕೆ ಪ್ರಕ್ರಿಯೆಯು ಐಸಿಸಿ ಟಿ20 ಶ್ರೇಯಾಂಕವನ್ನು ಆಧರಿಸಿರುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಹಾಗೆ ಆದರೆ, ಭಾರತವು ಪ್ರಸ್ತುತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಟಿ20ಯಲ್ಲಿ 20170 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 12417 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಶ್ರೇಯಾಂಕ ಪಟ್ಟಿ ಆಧರಿಸಿ ಆಯ್ಕೆ ಪ್ರಕ್ರಿಯೆ ಕೈಗೊಂಡರೆ, ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ ಅರ್ಹತೆ ಪಡೆಯಲು ಸಾಧ್ಯವಾಗಲ್ಲ. ಮಹಿಳಾ ಶ್ರೇಯಾಂಕದಲ್ಲೂ ಪಾಕಿಸ್ತಾನ ಇದೇ ಸ್ಥಿತಿಯಲ್ಲಿದೆ. ಮಹಿಳಾ ಶ್ರೇಯಾಂಕದಲ್ಲಿ ಪಾಕಿಸ್ತಾನ (8551) ಪ್ರಸ್ತುತ 8ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ (11583) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ (11728) ಮತ್ತು ಭಾರತ (11712) ನಂತರದ ಸ್ಥಾನದಲ್ಲಿವೆ.
1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಇದೆ ಮೊದಲ ಮತ್ತು ಕೊನೆಯದಾಯಿತು. ಇದರಲ್ಲಿ ಡೆವೊನ್ ಮತ್ತು ಸೋಮರ್‌ಸೆಟ್ ವಂಡರ್ ಕ್ಲಬ್ (ಬ್ರಿಟನ್) ಮತ್ತು ಫ್ರೆಂಚ್ ಅಥ್ಲೆಟಿಕ್ ಕ್ಲಬ್ ಯೂನಿಯನ್ (ಫ್ರಾನ್ಸ್) ನಡುವೆ ಎರಡು ದಿನದ ಪಂದ್ಯವಿತ್ತು.