ಹುಬ್ಬಳ್ಳಿ: –ನಗರದ ಈದಗಾ ( ರಾಣಿ ಚೆನ್ನಮ್ಮ) ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯ ವಿಸರ್ಜನೆಯ ಅದ್ಧೂರಿ ಮೆರವಣಿಗೆ ಇಂದು ಬೆಳಿಗ್ಗೆ ಆರಂಭವಾಯಿತು.
ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳ ಅಧ್ಯಕ್ಷ ಸಂಜು ಬಡಸ್ಕರ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿ ವಿಸರ್ಜನಾ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಮತ್ತುಬಿಜೆಪಿ ಹಿರಿಯ ಮುಖಂಡ ಸಿ.ಟಿ.ರವಿ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಶಾಸಕರಾದ ಮಹೇಶ ಟೆಂಗಿನಕಾಯಿ,ಪ್ರದೀಪ ಶೆಟ್ಟರ್, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಮಹೇಂದ್ರ ಕೌತಾಳ ಮುಂತಾದವರು ಇದ್ದರು.
ಪಂಚವಾದ್ಯ, ಡೋಲು, ಜಾಂಝ್, ಡಿಜೆ ಮೇಳಗಳು ಮೆರವಣಿಗೆ ಮೆರಗು ನೀಡಿದ್ದು, ಗಣೇಶ ಮಹಾರಾಜ, ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಹನುಮಾನ ಮಹಾರಾಜಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿದವು. ಕಿತ್ತೂರ ರಾಣಿ ಚನ್ನಮ್ಮ ವೃತ್ತ, ರಾಣಿ ಚನ್ನಮ್ಮ ಮೈದಾನ ಭಗವಾಧ್ವಜ, ಕೇಸರಿ ಬಾವುಟಗಳು ಹಾರಾಡುತ್ತಿದ್ದರೆ,ವಿಸರ್ಜನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಬಿಜೆಪಿ, ಆರ್‌ಎಸ್‌ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಹೆಚ್‌ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದಾರೆ. ನಗರದ ಪ್ರದೇಶ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ನೂರಾರ ಜನರು ಭಾಗವಹಿಸಿದ್ದಾರೆ.
ಬೆಳಿಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಸೇರಿ ಅನೇಕ ಗಣ್ಯರು ಈದಗಾ ಗಣೇಶನ ದರ್ಶನ ಪಡೆದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಶನಿವಾರ ಬೆಳಿಗ್ಗೆ ಬೃಹತ್ ಮೆರವಣಿಗೆಯಲ್ಲಿ ಮೂರುಸಾವಿರಮಠದಿಂದ ಗಣೇಶನ ವಿಗ್ರಹವನ್ನು ತಂದು ಸ್ಥಾಪಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಮೈದಾನದಿಂದ ಹೊರ ಬಂದ ಗಣೇಶ ಮೂರ್ತಿಯ ಮೆರವಣಿಗೆ ಇಂದಿರಾಗಾಜಿನ ಮನೆಯ ವಿಸರ್ಜನೆ ಬಾವಿಗೆ ತೆರಳಲು ಮೂರು ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳಲಿದ್ದು ಸಂಜೆ ೪ರೊಳಗೆ ವಿಸರ್ಜನೆ ಕಾರ್ಯ ನಡೆಯಬಹುದಾಗಿದೆ.ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ವರದಿ:- ಸುಧೀರ್ ಕುಲಕರ್ಣಿ