ತುರುವೇಕೆರೆ: ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿ ಸ್ವಕ್ಷೇತ್ರಕ್ಕೆ ಆಗಮಿಸಿದ ತುಮುಲ್ ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಅವರನ್ನು ತುರುವೇಕೆರೆ ತಾಲೂಕಿನ ಹಾಲು ಉತ್ಪಾದಕರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ತುಮುಲ್ ನಿರ್ದೇಶಕ ಸಿ.ವಿ.ಮಹಲಿಂಗಯ್ಯ,. ತುಮುಲ್ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಈ ಬಾರಿಯ ಚುನಾವಣೆ ಬಹಳ ಹೋರಾಟದಿಂದ ಕೂಡಿತ್ತು. ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನನಗೆ ಕಳೆದ ಬಾರಿಗಿಂತಲೂ ಹೆಚ್ಚಿನ ಮತವನ್ನು ನೀಡಿ ಆರ್ಶೀವದಿಸಿದ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿನಿಧಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಪಟ್ಟಣದ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನದ ಬಳಿ ಸಿ.ವಿ. ಮಹಲಿಂಗಯ್ಯ ಅವರು ಕಾರು ಆಗಮಿಸಿದ ಕೂಡಲೇ ಸ್ವಾಗತ ಕೋರಲು ಬಂದಿದ್ದ ನೂರಾರು ಅಭಿಮಾನಿಗಳು ಮಹಲಿಂಗಯ್ಯ ಅವರಿಗೆ ಪುಷ್ಪಾಹಾರ ಅರ್ಪಿಸಿ ಜಯಘೋಷ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ತುಮುಲ್ ನಿರ್ದೇಶಕ ಮಹಲಿಂಗಯ್ಯ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಅಭಿಮಾನಿಗಳು ಸಿದ್ದಪಡಿಸಿದ್ದ ವಿಶೇಷ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಸಿ.ವಿ.ಮಹಲಿಂಗಯ್ಯ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತುಮುಲ್ ಕಛೇರಿಗೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಉಗ್ರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯರಾದ ಮಹೇಶ್, ರುದ್ರೇಶ್, ಮುಖಂಡರಾದ ಮಲ್ಲಾಘಟ್ಟ ರವಿ, ಕೆ.ಟಿ.ಗೋವಿಂದರಾಜ್, ನಾಗರಾಜು, ಹರಿಕಾರನಹಳ್ಳಿ ಪ್ರಸಾದ್, ಸಿದ್ದರಾಜು, ಜಯಣ್ಣ, ಪಂಚಾಕ್ಷರಿ, ಮಂಜುನಾಥ್, ರಮೇಶ್, ನರೇಂದ್ರ, ನಿಜಗುಣ, ಮಂಜಣ್ಣ, ತಿಲಕ್ ಸೇರಿದಂತೆ ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು, ಹಾಲು ಉತ್ಪಾದಕರು, ರೈತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್