ತುರುವೇಕೆರೆ : ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಭಾರತದಾದ್ಯಂತ ಡಿಸೆಂಬರ್ 21 ರಿಂದ 24 ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನಲ್ಲೂ ಅಭಿಯಾನ ನಡೆಯಲಿದ್ದು, ತಾಲೂಕಿನ ಜನತೆ, ಪೋಷಕರು 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್ ಕುಂಇ ಅಹಮದ್ ಮನವಿ ಮಾಡಿದರು.
ತಾಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 2014 ರಲ್ಲಿ ಪೊಲಿಯೋ ಮುಕ್ತ ಭಾರತ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಣವನ್ನು ಪಡೆದಿದ್ದೇವೆ. ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ, ಜಿಲ್ಲೆ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಡಿಸೆಂಬರ್ 21 ರಿಂದ 24 ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದಕ್ಕಾಗಿ 90 ಬೂತ್ (ಕೇಂದ್ರ)ಗಳನ್ನು ಗುರುತಿಸಲಾಗಿದೆ. ಸೊನ್ನೆಯಿಂದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ತಾಲೂಕಿನ ಯಾವುದೇ ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದಾಗಿದೆ ಎಂದರು.
ತಾಲೂಕಿನಲ್ಲಿ ಸೊನ್ನೆಯಿಂದ 5 ವರ್ಷದೊಳಗಿನ ಸುಮಾರು 9533 ಮಕ್ಕಳಿದ್ದು, ತುರುವೇಕೆರೆ ಪಟ್ಟಣದಲ್ಲಿ 1189, ಗ್ರಾಮೀಣ ಪ್ರದೇಶದಲ್ಲಿ 8344 ಮಕ್ಕಳಿದ್ದಾರೆ. ಶೇ.100 ರಷ್ಟು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಡಿಸೆಂಬರ್ 21 ರಿಂದ ಈ ಕಾರ್ಯದಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ವಯಂ ಸೇವಕರು ಪ್ರತಿ ಮನೆಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಲಿದ್ದಾರೆ. ವಿಶೇಷವಾಗಿ ತಾಲೂಕಿನ ನಾಲ್ಕು ಕಡೆ ಟ್ರಾನ್ಸಿಸ್ಟರ್ ಬೂತ್ ಗಳನ್ನು ಸ್ಥಾಪಿಸಿದ್ದು, ತಾಲೂಕಿನ ಬಾಣಸಂದ್ರದ ರೈಲ್ವೆ ನಿಲ್ದಾಣ, ಅಮ್ಮಸಂದ್ರದ ರೈಲ್ವೆ ನಿಲ್ದಾಣ, ಮಲ್ಲಾಘಟ್ಟದ ಶ್ರೀ ಗಂಗಾಧರೇಶ್ವರ ದೇವಸ್ಥಾನ, ತುರುವೇಕೆರೆ ಸಾರಿಗೆ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದು ಅಲ್ಲಿ ಬರುವ ಪ್ರಯಾಣಿಕರು, ಪ್ರವಾಸಿಗರ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಿದ್ದರಿರುತ್ತಾರೆಂದರು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಡಿಸೆಂಬರ್ 21 ರಿಂದ 24 ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯ ನಡೆಯಲಿದೆ. ಸೊನ್ನೆಯಿಂದ 5 ವರ್ಷದೊಳಗಿನ ಮಕ್ಕಳನ್ನು ತಾಯಂದಿರು ಡಿಸೆಂಬರ್ 21 ರಂದು ಬೂತ್ ಗಳಿಗೆ ಕರೆತಂದು ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಮಕ್ಕಳು ಪೋಲಿಯೋ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳಬೇಕಿದೆ. ಡಿಸೆಂಬರ್ 22 ರಿಂದ 24 ರವೆರೆಗೆ ಮನೆ ಮನೆ ಅಭಿಯಾನ ನಡೆಯಲಿದ್ದು, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಲಸಿಕೆ ಪಡೆಯದ ಮಕ್ಕಳಿಗೆ ಸ್ಥಳದಲ್ಲೇ ಲಸಿಕೆ ಹಾಕಲಿದ್ದಾರೆ. ಪಟ್ಟಣದಲ್ಲಿ ಡಿಸೆಂಬರ್ 24 ರವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡಿಸೆಂಬರ್ 22 ಹಾಗೂ 23 ರಂದು ಮನೆ ಮನೆ ಭೇಟಿ ಕಾರ್ಯಕ್ರಮವಿದ್ದು, ಪೋಷಕರು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದರು. ಗೋಷ್ಟಿಯಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




