ಲಖನೌ: ಯಶ್ಪಾಲ್ ನಗರ್ ಮತ್ತು ಅವರ ಮಗ 21 ವರ್ಷದ ಶೇಖರ್ ಉತ್ತರ ಪ್ರದೇಶ ಪೊಲೀಸ್ ಪಡೆಯಲ್ಲಿ ಕಾನ್ಸ್‌ಟೇಬಲ್‌ಗಳಾಗಿ ಒಟ್ಟಿಗೆ ನೇಮಕಗೊಂಡಿದ್ದು, ಅವರ ಕುಟುಂಬಕ್ಕೆ ಡಬಲ್ ಹೆಮ್ಮೆಯ ಕ್ಷಣವಾಗಿದೆ.
ಇತ್ತೀಚೆಗೆ ನಡೆದ 60,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಭಿಯಾನದಲ್ಲಿ ಯಶ್ಪಾಲ್ ಮತ್ತು ಅವರ ಮಗ ಶೇಖರ್ ಇಬ್ಬರೂ ಆಯ್ಕೆಯಾಗಿದ್ದು, ಭಾನುವಾರ ಲಖನೌದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ.
ಯುಪಿ ಪೊಲೀಸ್ ನೇಮಕಾತಿ ಮಂಡಳಿ 2024 ರಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಭಿಯಾನ ಘೋಷಿಸಿತ್ತು.
ಅಪ್ಪ, ಮಗ ಇಬ್ಬರೂ ಪೊಲೀಸ್ ಪಡೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ. ಯಶ್ಪಾಲ್ ಶಹಜಹಾನ್‌ಪುರದಲ್ಲಿ ತರಬೇತಿ ಪಡೆಯಲಿದ್ದು, ಶೇಖರ್ ಬರೇಲಿಯಲ್ಲಿ ತರಬೇತಿ ಪಡೆಯಲಿದ್ದಾರೆ.
ಮಾಜಿ ಸೈನಿಕರಾಗಿರುವ ಯಶ್ಪಾಲ್ ನಗರ್ ಅವರು 16 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ನಂತರ 2019ರಲ್ಲಿ ಭಾರತೀಯ ಸೇನೆಯಿಂದ ವಿಆರ್‌ಎಸ್ ಪಡೆದಿದ್ದರು. ವಿಆರ್‌ಎಸ್ ಪಡೆದ ನಂತರ, ಅವರು ದೆಹಲಿಯ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್‌ಗೆ ಸೇರಿದ್ದರು.




