ಇಲಕಲ್ಲ : ಇಲ್ಲಿನ ನಗರಸಭೆ ಆವರಣದಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪೌರಕಾರ್ಮಿಕರ ಅನಿರ್ದಿಷ್ಟ ಮುಷ್ಕರಕ್ಕೆ, ದಲಿತ ಹಿತರಕ್ಷಣಾ ವೇದಿಕೆಯಿಂದ ಬೆಂಬಲ ವ್ಯಕ್ತವಾಗಿದೆ.
ಡಾ.ಬಾಬಾಸಾಹೇಬ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶರಣಪ್ಪ ಆಮದಿಹಾಳ ಅವರ ನೇತೃತ್ವದಲ್ಲಿ, ಎಲ್ಲಾ ಸದಸ್ಯರು ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡಿದರು.

ಈ ಸಂದರ್ಭ ಮಾತನಾಡಿದ ಶರಣಪ್ಪ ಆಮದಿಹಾಳ ಅವರು, “ಪೌರಕಾರ್ಮಿಕರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಅವರು ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದಾರೆ. ಅವರು ಹೋರಾಟದಿಂದ ಹಿಂದೆ ಸರಿಯಬಾರದು. ನಾವು ಸಂಪೂರ್ಣ ಬೆಂಬಲಿಸುತ್ತೇವೆ,” ಎಂದು ತಿಳಿಸಿದರು.
ಈ ವೇಳೆ ವೇದಿಕೆಯ ಉಪಾಧ್ಯಕ್ಷ ಯುವರಾಜ ಚಲವಾದಿ, ನಗರಸಭೆಯ ಸದಸ್ಯ ಸುರೇಶ್ ಜಂಗ್ಲಿ, ಗೈಬು ಛಲವಾದಿ, ಶ್ರೀಧರ್ ಕ್ಯಾತನ್, ದಿಲೀಪ್ ಕಲ್ಮನಿ, ಸಂಗಣ್ಣ ಜಂಗ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




