ಸೇಡಂ: ಬಾಲ ಸಂಸ್ಕಾರ ಕೇಂದ್ರದ ದಶಮಾನೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ “ದಶ ದಿಕ್ಕುಗಳಲ್ಲಿ ದಶ ದಿವ್ಯ ಪ್ರೇಮ ದಿವಸ” ಸರಣಿಯ ಹತ್ತನೆಯ ಹಾಗೂ ಕೊನೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಶಾಲೆ ಹೂಡಾ ಭೀಮನಗರ ನಲ್ಲಿ ಜರುಗಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಸ್ತೂರಿ ಸೇಡಂಕರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಮಕ್ಕಳ ಜೀವನದಲ್ಲಿ ತಂದೆ ತಾಯಿಯ ಪಾತ್ರ ಬಹಳ ದೊಡ್ಡದು. ಆದರೆ ಇಂದು ಮಕ್ಕಳು ದೊಡ್ಡವರಾದ ನಂತರ ತಂದೆ ತಾಯಿಯವರನ್ನೆ ನಿರ್ಲಕ್ಷಿಸುತ್ತಿದ್ದಾರೆ. ಇದು ದುಃಖಕರ ವಿಷಯ. ಮಕ್ಕಳಲ್ಲಿ ಪಾಲಕರ ಮಹತ್ವದ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಯೂ ಜರುಗಬೇಕು ಎಂದು ಹೇಳಿದರು.
ಬಾಲ ಸಂಸ್ಕಾರ ಕೇಂದ್ರದ ಸೂರ್ಯನಾರಾಯಣ ಚಿಮ್ಮನಚೋಡಕರ ಮಾತನಾಡಿ ತಂದೆ ತಾಯಿಯೆಂದರೆ ಕಣ್ಣಿಗೆ ಕಾಣುವ ದೇವರು. ತಂದೆ ತಾಯಿಗಳನ್ನು ಯಾರು ಗೌರವಿಸುವುದಿಲ್ಲವೋ ಅವರನ್ನು ಜಗತ್ತು ಸಹ ಗೌರವಿಸುವುದಿಲ್ಲ. ಇದಕ್ಕೆ ಹೆತ್ತ ತಂದೆಯನ್ನು ಜೈಲಿಗೆ ಹಾಕಿದ ಕಂಸನೇ ಸಾಕ್ಷಿ ಎಂದು ಹೇಳಿದರು . ಇಂದು ಚರಿತ್ರೆಯಲ್ಲಿ ಕಂಸನನ್ನು ಎಲ್ಲರೂ ಹೀನಾಯವಾಗಿ ಕಂಡರೆ, ಪಿತೃ ವಾಕ್ಯ ಪಾಲನೆಗಾಗಿ ರಾಜ್ಯವನ್ನೆ ತ್ಯಾಗ ಮಾಡಿದ ಶ್ರೀರಾಮನನ್ನು ದೇವರೆಂದು ಪೂಜಿಸುತ್ತಾರೆ. ಇದಕ್ಕಾಗಿ ಎಲ್ಲಾ ಮಕ್ಕಳಲ್ಲಿ ತಾಯಿ ತಂದೆಯವರ ಪ್ರಿತಿ ಪೂಜ್ಯಭಾವ ಬರಲಿ ಎಂದು ಹೇಳಿದರು.

ವೇದಿಕೆ ಮೇಲೆ ನಿವೃತ್ತ ಶಿಕ್ಷಕರಾದ ಹಣಮಂತರಾವ ಸೇಡಂಕರ, ಶಿಕ್ಷಕರಾದ ರೋಹಿತ, ಡಾ.ಶರಣಬಸ್ಸಪ್ಪಾ, ಸತ್ಯ ಯುಗ ಫೌಂಡೇಷನ್ ಅಧ್ಯಕ್ಷೆ ಶಿವಕಾಂತಮ್ಮ ಚಿಮ್ಮನಚೋಡಕರ್, ಹಿರಿಯ ಸಮಾಜ ಸೇವಕರಾದ ಗಣಪತರಾವ ಚಿಮ್ಮನಚೋಡಕರ್ ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಮಕ್ಕಳು ಪಾಲಕರ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದರು. ಶಾಲೆಯ ನೂರಾರು ಮಕ್ಕಳು, ಶಿಕ್ಷಕರು ಹೂಡಾ ಗ್ರಾಮದ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




