ಬೆಂಗಳೂರು: ಡಾ.ಮನಮೋಹನ್ ಸಿಂಗ್ ವಿಧಿವಶರಾದ ಹಿನ್ನೆಲೆಯಲ್ಲಿ ರದ್ದಾಗಿದ್ದ ಬೆಳಗಾವಿ ಎಐಸಿಸಿ ಅಧಿವೇಶನದ ಸಮಾವೇಶ ಪುನರ್ ನಿಗದಿಯಾಗಿದ್ದು, ದಿನಾಂಕ ಘೋಷಣೆಯಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಡಾ.ಮನಮೋಹನ್ ಸಿಂಗ್ ನಿಧನದಿಂದ ಕಾಂಗ್ರೆಸ್ ಅಧಿವೇಶನ ಡಿ.27ರ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಜನವರಿ 21ರಂದು ಮತ್ತೆ ಎಐಸಿಸಿ ಸಮಾವೇಶ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಡಿ.27ರಂದು ರದ್ದಾಗಿದ್ದ ಎಲ್ಲಾ ಕಾರ್ಯಕ್ರಮಗಳು ಜನವರಿ 21ರಂದು ನಡೆಯಲಿದ್ದು, ಅಂದು ಬೆಳಿಗ್ಗೆ ಸುವರ್ಣ ವಿಧಾನಸೌಧ ಎದುರು ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಲಾಗುವುದು. ಬಳಿಕ ನಗರದ ಸಿಪಿಎಡ್ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.