ದಾವಣಗೆರೆ: ಪೊಲೀಸ್ ವೃತ್ತಿಯಲ್ಲಿದ್ದ ಮಗನನ್ನು ಕಳೆದುಕೊಂಡು ಪುತ್ರ ಶೋಕದಲ್ಲಿದ್ದ ತಾಯಿಗೆ ದಾವಣಗೆರೆ ಪೊಲೀಸರು ನೆರವಾಗಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಒಡೇರಹಳ್ಳಿ ಗ್ರಾಮದ ಕೆಂಚಮ್ಮನಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು. ಕೆಂಚಮ್ಮ ಅವರ ಪುತ್ರ ಕುಬೇರ 2011 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಕುಬೇರ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ಪುತ್ತೂರಿನಿಂದ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಬರುವಾಗ ಮಲೆಬೆನ್ನೂರು ಬಳಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವಾಗ ಪುತ್ತೂರಿಗೆ ಹೋಗಿದ್ದ ಕೆಂಚಮ್ಮ ಪುತ್ರ ಧರಿಸಿದ್ದ ಬಿಳಿ ಅಂಗಿ, ಖಾಕಿ ಪ್ಯಾಂಟ್ ನೋಡಿ ಖುಷಿ ಪಟ್ಟಿದ್ದರು. ಮಗನ ಸಾವಿನ ನಂತರವೂ ಕೆಂಚಮ್ಮ ಯಾರಾದರೂ ಟ್ರಾಫಿಕ್ ಪೊಲೀಸರನ್ನು ನೋಡಿದ್ರೆ ಅವರ ಬಳಿ ಹೋಗಿ ನನ್ನ ಮಗನೂ ನಿನ್ನಂಗೆ ಇದ್ದ ಕಣಪ್ಪ, ನಿನ್ನಂಗೆ ಕೆಲಸ ಮಾಡುತ್ತಿದ್ದ. ಆದರೆ, ಅವನು ಈಗ ಇಲ್ಲ ಅಂತ ಕಣ್ಣೀರು ಹಾಕುತ್ತಿದ್ದರು.
ತಾಯಿಯ ಸಂಕಷ್ಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ರೇವಣಸಿದ್ದಪ್ಪ: ದಾವಣಗೆರೆ ಉತ್ತರ ಸಂಚಾರಿ ಠಾಣೆ ಕಾನ್ಸ್ಟೇಬಲ್ ರೇವಣಸಿದ್ದಪ್ಪ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಂಚಮ್ಮ ಭೇಟಿ ಆಗಿ ತಮ್ಮ ಮಗನನ್ನು ಕಳೆದುಕೊಂಡ ಬಗ್ಗೆ ಅಳಲು ತೊಡಿಕೊಂಡಿದ್ದರು. ಬಳಿಕ ರೇವಣಸಿದ್ದಪ್ಪ ಯಾರು ನಿಮ್ಮ ಪುತ್ರ, ಹೆಸರೇನು ಎಂದು ವಿಚಾರಿಸಿದಾಗ ಆಕೆ ಮೃತ ಕುಬೇರನ ತಾಯಿ ಎಂದು ಗೊತ್ತಾಗಿದೆ. ಬಳಿಕ ರೇವಣಸಿದ್ದಪ್ಪ ಆ ತಾಯಿಯ ಕಷ್ಟ ಕೇಳಿ ಅದನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದರು. ಇದನ್ನು ನೋಡಿದ ಪೊಲೀಸರಿಗೆ ಮನ ಮಿಡಿದಿದೆ.
ಆರ್ಥಿಕ ಸಹಾಯ: ರಾಜ್ಯದ ವಿವಿಧ ಭಾಗದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ. ಒಟ್ಟು 1,71,000 ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಅಂಚೆ ಕಚೇರಿಯಲ್ಲಿ ಐದು ವರ್ಷಕ್ಕೆ ಡಿಪಾಸಿಟ್ ಮಾಡಿಸಿದ್ದಾರೆ. ಪ್ರತಿ 3 ತಿಂಗಳಿಗೊಮ್ಮೆ 4 ರಿಂದ 5 ಸಾವಿರ ರೂಪಾಯಿ ಬಡ್ಡಿ ರೂಪದಲ್ಲಿ ಕೆಂಚಮ್ಮ ಅವರಿಗೆ ಹಣ ಸಿಗಲಿದೆ.
ಮೃತ ಕುಬೇರ ಅವರ ತಾಯಿ ಕೆಂಚಮ್ಮ ಮಾತನಾಡಿ, “ಪುತ್ರ ಕುಬೇರ ಪುತ್ತೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಪುತ್ತೂರಿನ ಮಹಾಂತೇಶ್ ಎಂಬ ಪೊಲೀಸ್ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ. ಇದೀಗ ದಾವಣಗೆರೆ ಪೊಲೀಸರು, ಎಸ್ಪಿ ಅವರು ಸಹಾಯ ಮಾಡಿದ್ದಾರೆ” ಎಂದರು.
ಪೊಲೀಸ್ ಕಾನ್ಸ್ಟೇಬಲ್ ರೇವಣಸಿದ್ದಪ್ಪ ಮಾತನಾಡಿ, ಮೃತ ಕುಬೇರ ಮತ್ತು ನಾನು 2011ರ ಬ್ಯಾಚ್ಗೆ ಸೇರಿದವರಾಗಿದ್ದೆವು. ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಕುಬೇರ ರಜೆಗೆಂದು ಊರಿಗೆ ಬರುವ ವೇಳೆ ಅಪಘಾತದಿಂದ ಮೃತಪಟ್ಟಿದ್ದರು. ಕೆಂಚಮ್ಮ ಅವರ ಭೇಟಿಯಿಂದ ಈ ವಿಷಯ ತಿಳಿಯಿತು. ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ತಿಳಿದಾಗ ಅವರಿಗೆ ಸಹಾಯ ಮಾಡಿದ್ದೇವೆ ಎಂದು ತಿಳಿಸಿದರು.