Ad imageAd image

ಖಾಸಗಿ ಶಾಲೆಗಳು ಡೊನೇಶನ್ ಪಡೆದರೇ ನೋಂದಣಿ ರದ್ದು : ಡಿಸಿ ನಿತೇಶ್ ಪಾಟೀಲ ಎಚ್ಚರಿಕೆ 

Bharath Vaibhav
ಖಾಸಗಿ ಶಾಲೆಗಳು ಡೊನೇಶನ್ ಪಡೆದರೇ ನೋಂದಣಿ ರದ್ದು : ಡಿಸಿ ನಿತೇಶ್ ಪಾಟೀಲ ಎಚ್ಚರಿಕೆ 
WhatsApp Group Join Now
Telegram Group Join Now

ಬೆಳಗಾವಿ: ಅನುದಾನ ರಹಿತ ಅಥವಾ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಯಾವುದೇ ರೀತಿಯ ಡೊನೇಶನ್ ಪಡೆಯುವಂತಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದಿರುವುದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಶಾಲೆಗಳಲ್ಲಿ ಡೊನೇಶನ್ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿರುತ್ತವೆ.

ನಿಯಮಾನುಸಾರ ಸರ್ಕಾರ ನಿಗದಿಪಡಿಸಿದ ಶುಲ್ಕಗಳನ್ನು ಮಾತ್ರ ಪಡೆದುಕೊಂಡು ಪ್ರವೇಶ ಕಲ್ಪಿಸಬೇಕು. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದರೆ ಆರ್.ಟಿ‌.ಇ. ಕಾಯ್ದೆ ಪ್ರಕಾರ ಅಂತಹ ಶಾಲೆಗಳ ನೋಂದಣಿಯನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರವೇಶ ಶುಲ್ಕ-ಮಾಹಿತಿ ಪ್ರದರ್ಶಿಸಲು ಸೂಚನೆ:

ಪಾಲಕರು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರತಿಯೊಂದು ಶಾಲೆಯು ತನ್ನ ಸೂಚನಾ ಫಲಕದಲ್ಲಿ ಪ್ರವೇಶ ಶುಲ್ಕ ಕುರಿತು ಸ್ಪಷ್ಟ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ-2009 ರ ಸೆಕ್ಷನ್ -2(ಬಿ) ರಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿದ ಶುಲ್ಕವನ್ನು ತಮ್ಮ ಶಾಲೆಯ ಅಂತರ್ಜಾಲ ತಾಣ, ಶಾಲಾ ನೋಟಿಸ್ ಬೋರ್ಡ್ ಹಾಗೂ ಇಲಾಖಾ ಅಂತರ್ಜಾಲ(ಎಸ್.ಎ.ಟಿ.ಎಸ್)ದಲ್ಲಿ ಪೋಷಕರು ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.

ಇದರಿಂದ ಪಾಲಕರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಲಭಿಸುವುದರಿಂದ ಪ್ರವೇಶ ಪ್ರಕ್ರಿಯೆ ಕುರಿತ ಗೊಂದಲವನ್ನು ಪರಿಹರಿಸಬಹುದು.

ಸಾರ್ವಜನಿಕರು ದೂರು ಸಲ್ಲಿಸಲು ಅವಕಾಶ:

ಜಿಲ್ಲೆಯಲ್ಲಿ ಯಾವುದೇ ಶಾಲೆಯು ಡೊನೇಶನ್ ಕೇಳಿದರೆ ಅಥವಾ ಡೊನೇಶನ್ ಪಡೆದುಕೊಂಡರೆ ಕೂಡಲೇ ಜಿಲ್ಲಾಧಿಕಾರಿ ಕಚೇರಿ ಅಥವಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ(ಡಿಡಿಪಿಐ) ಕಚೇರಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಸಾರ್ವಜನಿಕರ ದೂರು ಆಧರಿಸಿ ಸಂಬಂಧಿಸಿದ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!