ಮಂಡ್ಯ: ಗಂಗಾರತಿ ಮಾದರಿಯಲ್ಲಿಯೇ ಕೆಆರ್ ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನಿಗಮ ಸೇರಿಕೊಂಡು ಕಾವೇರಿ ಆರತಿ ಕಾರ್ಯಕ್ರಮ ನಡೆಸಲಿದೆ.ಈ ಬಗ್ಗೆ 25 ಜನರ ತಂಡ ವರದಿ ಕೊಡಲಿದೆ ಎಂದರು.
ಈ ಬಾರಿ ವರುಣನ ಕೃಪೆಯಿಂದ ಚಾಮುಂಡೇಶ್ವರಿ ದೇವಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಅವಕಾಶ ಬಂದಿದೆ. ಕಳೆದ ವರ್ಷ ಮಳೆ ಇಲ್ಲದೇ ಕಷ್ಟದಲ್ಲಿದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ. ಕಲೆದ ವರ್ಷ 200 ತಾಲೂಕುಗಳಲ್ಲಿ ಬರಗಾಲವಿತ್ತು. ಕಾವೇರಿ ಪ್ರಾಧಿಕಾರದ ಆದೇಶದ ಪ್ರಕಾರ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕಿತ್ತು.
ಆದರೆ ನಾವು ಅಷ್ಟು ನೀರು ಬಿಟ್ಟಿಲ್ಲ. ಆರಂಭದಲ್ಲಿ 20 ಟಿಎಂಸಿ ಬಿಟ್ಟಿದ್ದೆವು. ಬಳಿಕ ಎಲ್ಲರನ್ನು ಕರೆದು ಚರ್ಚಿಸಿದ ಬಳಿಕ 30 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ಇನ್ನೂ 10 ಟಿಎಂಸಿ ನೀರು ಬಿಡಬೇಕಿದೆ. ಈ ವರ್ಷದ ಕೋಟಾ ಮುಗಿಯುತ್ತದೆ. 50 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಹೇಳಿದರು.