ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಪಕ್ಷದಲ್ಲಿನ ಹುದ್ದೆಯನ್ನು ಮೀಡಿಯಾದವರು ಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಶೀಘ್ರವೇ ಆಗಬೇಕು.ವೋಟು ತರುವವರನ್ನು ನೇಮಕ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೇ ಹುದ್ದೆ, ಸ್ಥಾನಮಾನ ಬೇಕೆಂದರೆ ಅದನ್ನು ಮೀಡಿಯಾ ಮುಂದೆ ಯಾರಾದರೂ ಹೋಗಿ ಕೇಳ್ತಾರ? ಹುದ್ದೆ, ಸ್ಥಾನಮಾನವನ್ನು ಮೀಡಿದಾವರು ಕೊಡ್ತಾರಾ? ಅಥವಾ ಅಂಗಡಿಯಲ್ಲಿ ಸಿಗುವಂತದ್ದಾ? ನಾವು ಮಾಡಿದ ಕೆಲಸವನ್ನು ಗಮನಿಸಿ ಪಕ್ಷ ಕೊಡುವಂತದ್ದು ಎಂದರು.
ನಾವು ಮಾಡಿದ ಕೆಲಸದ ಮೇಲೆ ಪಕ್ಷದಲ್ಲಿ ಹುದ್ದೆ ಸಿಗುತ್ತದೆ. ಹೀಗಿರುವಾಗ ಈ ರೀತಿ ಮೀಡಿಯಾದ ಮುಂದೆ ಹೋಗಿ ಹೇಳುವಂತಹ ಕೆಲಸ ಇದನ್ನು ನಾನು ಹೊಸದಾಗಿ ನೋಡುತ್ತಿದ್ದೇನೆ ಎಂದರು. ಇದೇ ವೇಳೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೂ, ಹೇಳಿಕೊಳ್ಳಲಿ ಬಿಡಿ ಎಂದು ಗುಡುಗಿದರು.