ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ತನಿಖೆಗೆ ರಚನೆಯಾಗಿರುವ ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಕೇಸ್ ನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ ಹೆಚ್,ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಈ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಸವಣ್ಣನವರ ವಚನದ ಮೂಲಕ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತಸಿಕೊಳ್ಳಿ’ ಎಂದು ಬಸವಣ್ಣನವರು ಹೆಳಿದ್ದಾರೆ. ಹಾಗೇ ಲೋಕದ ಡೊಂಕನ್ನು ತಿದ್ದುವ ಬದಲು ನಿಮ್ಮ ಮನೆಯನ್ನು ಮೊದಲು ರಿಪೇರಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಬೇರೆಯವರ ಬಗ್ಗೆ ಯಾಕೆ ಮಾತನಾಡುತ್ತೀರಿ? ಬೇರೆಯವರ ತಂಟೆ ನಿಮಗ್ಯಾಕೆ ಮೊದಲು ನಿಮ್ಮ ನಿಮ್ಮ ಮನೆ ಸರಿಪಡಿಸಿಕೊಳ್ಳಿ ಎಂದು ಬಸವಣ್ಣ ಹೇಳಿದ್ದಾರೆ.
ಅದೇ ರೀತಿ ಮೊದಲು ನಾವು ಪಾಲಿಸಿಕೊಂಡು ಹೋಗೋಣ. ಆಮೇಲೆ ಬೇರೆಯವರ ವಿಚಾರ ಮಾತನಾಡೋಣ. ಎಸ್‌ಐಟಿ ಅವರು ಅವರ ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗಲ್ಲ ಎಂದು ಹೇಳಿದರು.