ವರಂಗಲ್, ತೆಲಂಗಾಣ: ಕಲ್ಲಿದ್ದಲಿನ ತುಣುಕೊಂದು ಬಾಲಕನ ಪ್ರಾಣ ತೆಗೆದಿದೆ. ತನ್ನ ಇಬ್ಬರು ಅಕ್ಕಂದಿರೊಂದಿಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಲ್ಲಿದ್ದಲು ತುಣುಕೊಂದನ್ನು ನುಂಗಿದ್ದರಿಂದ ತೊಂದರೆಗೊಳಾಗಿ ಮೃತಪಟ್ಟಿರುವ ದಾರುಣ ಘಟನೆ ವರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ಗೀಸುಕೊಂಡ ಮಂಡಲದ ವಿಶ್ವನಾಥಪುರ ಗ್ರಾಮದ ನಿವಾಸಿ ಕೊರ್ರರಾಜು ಕೊಮ್ಮಲ ಬಸ್ ನಿಲ್ದಾಣದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಅಯಾನ್ (9 ತಿಂಗಳು) ನೊಂದಿಗೆ ಜೀವನ ಸಾಗಿಸುತ್ತಿದ್ದರು. ಇವರ ಮಗು ಅಯಾನ್ ಕಲ್ಲಿದ್ದಲು ತುಂಡನ್ನು ನುಂಗಿ ಅಸುನೀಗಿದೆ.
ಕಳೆದ ಶನಿವಾರ ಬಿರಿಯಾನಿ ಅಡುಗೆ ತಯಾರು ಮಾಡಿದ್ದ ರಾಜು, ಬಿರಿಯಾನಿಯನ್ನು ಬಿಸಿಯಾಗಿರಿಸುವ ಸಲುವಾಗಿ ಬಟ್ಟಲಿನಲ್ಲಿ ಕಲ್ಲಿದ್ದಲನ್ನು ಇಟ್ಟಿದ್ದರು. ಇನ್ನು ತನ್ನ ಅಕ್ಕಂದಿರ ಜತೆ ಆಟವಾಡುತ್ತಿದ್ದ ಅಯಾನ್ ಬಟ್ಟಲಿನಲ್ಲಿದ್ದ ಕಲ್ಲಿದ್ದಲಿನ ತುಂಡನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಈ ಕಲ್ಲಿದ್ದಲು ತುಂಡು ಆತನ ಬಾಯಲ್ಲಿ ಸಿಲುಕಿಕೊಂಡಿದ್ದರಿಂದ ತೀವ್ರ ತೊಂದರೆಗೊಳಗಾಗಿದ್ದ.
ಮಗು ಕಲ್ಲಿದ್ದಲು ನುಂಗಿ ತೀವ್ರ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ತಂದೆ ರಾಜು, ನರಸಂಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಬೇರೆಡೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದಾರೆ. ಹೀಗಾಗಿ ಮಗು ಅಯಾನ್ ನನ್ನು ವಾರಂಗಲ್‌ನ ಎಂಜಿಎಂಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಸಾಧ್ಯವಾಗದ್ದರಿಂದ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ ಇಲ್ಲೂ ಸಹ ಚಿಕಿತ್ಸೆ ಫಲಿಸದೇ ಮಗು ಭಾನುವಾರ ರಾತ್ರಿ ಮೃತಪಟ್ಟಿದೆ. ಮೃತನ ತಂದೆ ರಾಜು ನೀಡಿದ ದೂರಿನ ಮೇರೆಗೆ ಗೀಸುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.