ಕಲಘಟಗಿ: -ಸತತ ಮಳೆಯಿಂದ ಬಹುತೇಕ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಲಘಟಗಿ ತಾಲೂಕನ್ನು ಹಸಿರು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಎಂ.ಎಲ್.ಸಿ ನಾಗರಾಜ ಛಬ್ಬಿ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಮಳೆಯ ಕಣ್ಣಾಮುಚ್ಚಾಲೆಯಿಂದ ತಾಲೂಕಿನ ರೈತರು ನಿಜಕ್ಕೂ ಸಂಕಷ್ಟ ಎದುರಿಸುವಂತಾಗಿದೆ. ಉತ್ತಮ ಮಳೆ ಸುರಿದು ಬಾಳು ಹಸನು ಆಯಿತು ಎನ್ನವುಷ್ಟರಲ್ಲಿ ವರುಣ ಆರ್ಭಟ ಕೃಷಿಕರನ್ನು ಕಂಗಾಲಾಗಿಸಿದೆ. ಅತೀವೃಷ್ಟಿ ಆಗಿ ಬೆಳೆ ಸಂಪೂರ್ಣ ಹಾಳಾಗಿವೆ ರೈತರು ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ ಎಂದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವ ಕ್ಷೇತ್ರದ ರೈತರ ನೋವು ಕಲಘಟಗಿ ಕ್ಷೇತ್ರದ ಶಾಸಕರು, ಸಚಿವ ಸಂತೋಷ ಲಾಡ್ ಅವರಿಗೆ ಕಾಣುತ್ತಿಲ್ಲ. ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸವನ್ನೂ ಸಚಿವರು ಮಾಡಿಲ್ಲ. ಬೆಳೆ ಹಾನಿಯಿಂದ ತೊಂದರೆಗೆ ಸಿಲುಕಿರುವ ಕೃಷಿಕರಿಗೆ ತಕ್ಷಣ ಸ್ಪಂದಿಸಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿ ಜನಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ರಾತ್ರಿ ವೇಳೆ ಸಂಚರಿಸುವುದೇ ದುಸ್ತರ ಎನಿಸಿದೆ. ಎಷ್ಟೋ ವಾಹನ ಜನರು ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗಿವೆ. ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ. ನೂತನ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ನೂತನ ಸದಸ್ಯತ್ವ ಅಭಿಯಾನ ಕೂಡ ನಡೆಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಶೆರೇವಾಡ, ಬಿಜೆಪಿ ಮುಖಂಡರಾದ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಅಣ್ಣಪ್ಪ ಓಲೇಕಾರ, ಫಕ್ಕೀರೇಶ ನೇಸರೇಕರ, ಮಹಾಂತೇಶ ತಹಶೀಲ್ದಾರ್, ಕಿರಣಕುಮಾರ ಪಾಟೀಲ ಕುಲಕರ್ಣಿ, ವಜ್ರಕುಮಾರ ಮಾದನಬಾವಿ, ಬಸವರಾಜ ಮಾದರ, ಮಂಗಲಪ್ಪ ಲಾಮಾಣಿ ಇತರರಿದ್ದರು
ವರದಿ :-ನಿತೀಶ್ ಗೌಡ