ಸಿರುಗುಪ್ಪ : ತಾಲೂಕಿನ ಕೊತ್ತಲಚಿಂತ ಗ್ರಾಮದ ಸದ್ಭಕ್ತರಿಂದ ವಿಜಯದಶಮಿ ನಿಮಿತ್ತ ಶ್ರೀ ಅಭಯಾಂಜನೇಯ್ಯ ಸ್ವಾಮಿಗೆ ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿ ಬೆಳ್ಳಿ ಕವಚವನ್ನು ಮೆರವಣಿಗೆ ಮೂಲಕ ತಂದು ದೇವಸ್ಥಾನದಲ್ಲಿ ಅಲಂಕರಿಸಲಾಯಿತು.
ಗ್ರಾಮಕ್ಕೆ ಆಗಮಿಸಿದ ನೂತನ ಕವಚವನ್ನು ಸುಮಂಗಲೆಯರು ಕಳಸವನ್ನು ಹಿಡಿದು ಪೂಜೆ ಸಲ್ಲಿಸಿ ಸ್ವಾಗತ ಮಾಡಿಕೊಂಡರು.
ಡೊಳ್ಳುವಾದ್ಯ ಇನ್ನಿತರ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಹನುಮಂತಾವದೂತರ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿನ ಎಲ್ಲಾ ದೇವತೆಗಳಿಗೆ ವಿಶೇಷ ಪೂಜೆ ಮಾಡಲಾಗಿದ್ದು, 7 ಲಕ್ಷಕ್ಕೂ ಅಧಿಕ ಮೊತ್ತದ ಬೆಳ್ಳಿಯಿಂದ ತಯಾರಿಸಿದ ಶ್ರೀ ಅಭಯಾಂಜನೇಯ್ಯಸ್ವಾಮಿ ಮೂರ್ತಿಯನ್ನು ಹೋಲುವ ಕವಚದಿಂದ ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಿದರು.
ನವರಾತ್ರಿ ಅಂಗವಾಗಿ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಆರಂಭವಾದ ದೇವಿ ಪುರಾಣ ಪ್ರವಚನ ಮಹಾಮಂಗಲಗೊಂಡಿದ್ದು, ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲರೂ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.
ವರದಿ : ಶ್ರೀನಿವಾಸ ನಾಯ್ಕ