ಗೋಕಾಕ್: – ಸೋಲಿನ ಭೀತಿಯಿಂದ ಬಿಜೆಪಿಯವರಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆ
ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಸಚಿವರಿಂದ ಬಿರುಸಿನ ಪ್ರಚಾರ
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೋಕಾಕ್ ವಿಧಾನಸಭಾ ಕ್ಷೇತ್ರದ ಶಿಂದಿಕುರಬೇಟ, ಧೂಪದಾಳ ಹಾಗೂ ಪಾಮಲದಿನ್ನಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದ ಸಚಿವರು, ಚುನಾವಣೆ ಬಳಿಕ ನಿಲ್ಲಿಸಲು ಇದು ಮೋದಿ ಗ್ಯಾರಂಟಿ ಅಲ್ಲ. ಇವು ಸಿದ್ದರಾಮಯ್ಯ ಗ್ಯಾರಂಟಿ, ಯಾವತ್ತೂ ಬಂದ್ ಆಗೋದಿಲ್ಲ ಎಂದು ಹೇಳಿದರು.
ಇವತ್ತಿನ ಪ್ರಚಾರದ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನನ್ನ ಜೊತೆ ಹೆಜ್ಜೆ ಹಾಕಿದರು. ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿರೋದೆ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ಸರ್ಕಾರ ಬಂದರೆ ಐದು ಗ್ಯಾರಂಟಿ ಯೋಜನೆ ನೀಡುವುದಾಗಿ ಭರವಸೆ ನೀಡಿದ್ದೇವು. ಇಂದು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿವೆ ಎಂದು ಹೇಳಿದರು.
ಬಿಜೆಪಿಯವರು ಹತಾಶೆಯಿಂದ ಇಂದು ನಮ್ಮ ಬಗ್ಗೆ ಮಾತಾನಾಡುತ್ತಿದ್ದಾರೆ. ಹಿಂದೆ ಎರಡು ಕೋಮಿನ ನಡುವೆ ಜಗಳ ಮಾಡಿಸಿ ಅಧಿಕಾರಕ್ಕೇರುತ್ತಿದ್ದರು. ಕೇಂದ್ರ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯಲ್ಲೂ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ನಾವು ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ನನ್ನ ಮಗ ಬಹಳ ಸುಸಂಸ್ಕೃತ, ಸಮಾಜದ ಜೊತೆ ಎಲ್ಲಾ ಸಮುದಾಯದವರನ್ನ ಜೊತೆಯಾಗಿ ಕರೆದುಕೊಂಡು ಹೋಗಲಿದ್ದಾನೆ. ನನ್ನ ಮಗನಿಗೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿಸಿದರು.
ಎರಡು ತಿಂಗಳ ಹಿಂದಷ್ಟೇ ಮೋದಿ, ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಜಗದೀಶ್ ಶೆಟ್ಟರ್, ಇದೀಗ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು. ಹೊರಗಿನ ಅಭ್ಯರ್ಥಿಯನ್ನು ತಿರಸ್ಕರಿಸಿ ಮನೆ ಮಗನನ್ನು ಗೆಲ್ಲಿಸಿ ಎಂದರು.
ಈ ವೇಳೆ ಮುಖಂಡರಾದ ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಸಿದ್ದಲಿಂಗ ದಳವಾಯಿ, ಗಂಗಾಧರ ಬಡಕುಂದ್ರಿ, ಚಂದ್ರಶೇಖರ ಕೊಣೂರ, ಪುಟ್ಟು ಖಾನಾಪುರ, ಇಮರಾನ್ ತಪರೇರ್, ಲಕ್ಕಣ್ಣ ಸವಸುದ್ದಿ, ವಿವೇಕ್ ಜಪ್ತಿ, ಮಾರುತಿ ವಿಜಯನಗರ, ಮಲಕಾರಿ ಭಂಗಿ, ಕಲ್ಪನಾ ಜೋಷಿ, ಮಲ್ಲಯ್ಯ ಹಿರೇಮಠ, ಮಾಲಪ್ಪ ದಂಡಿನ, ವಿಠಲ್ ರಕ್ಷಿ, ಭೀರಪ್ಪ ಪ್ರಧಾನಿ, ಅಜಪ್ಪ ದಂಡಿನ, ಮಲ್ಲಪ್ಪ ರಾಜಾಪೂರ, ಪುಟ್ಟು ಖಾನಾಪುರ, ನೇಮಣ್ಣ ಭಮ್ಮಣವರ್, ಚಂದ್ರಶೇಖರ್ ಕೊಣೂರ,ಮಹದೇವ ಬಳಿಗಾರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ