ಪಾಕಿಸ್ತಾನದ ಸೋಲಿನ ಸರಣಿ ಟಿ20 ಮಾದರಿಯಲ್ಲೂ ಮುಂದುವರೆದಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅವಮಾನಕರ ಸೋಲಿನ ಬಳಿಕ 5 ಪಂದ್ಯಗಳ ಟಿ20 ಸರಣಿ ಆಡಲು ನ್ಯೂಜಿಲೆಂಡ್‌ಗೆ ತೆರಳಿರುವ ಪಾಕಿಸ್ತಾನ ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋತಿತ್ತು, ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಮತ್ತೊಮ್ಮೆ ಸೋಲು ಕಂಡಿದ್ದು ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಡುನೆಡಿನ್‌ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮಳೆಯಿಂದಾಗಿ ಪಂದ್ಯವನ್ನು 15 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 15 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು.
ನಾಯಕ ಸಲ್ಮಾನ್ ಆಘಾ 28 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ ತಂಡಕ್ಕೆ ನೆರ ವಾದರು. ಶದಾಬ್ ಖಾನ್ 14 ಎಸೆತಗಳಲ್ಲಿ 26 ರನ್ ಗಳಿಸಿದರು. ಶಹೀನ್ ಅಫ್ರಿದಿ ಕೂಡ 14 ಎಸೆತಗಳಲ್ಲಿ 22 ರನ್ ಗಳಿಸಿ ಪಾಕಿಸ್ತಾನ ಸವಾಲಿನ ಮೊತ್ತ ಕಲೆಹಾಕಲು ಕೊಡುಗೆ ನೀಡಿದರು.
ನ್ಯೂಜಿಲೆಂಡ್ ಪರವಾಗಿ ಜೇಕಬ್ ಡುಫಿ, ಬೆನ್ ಸೀಯರ್ಸ್, ಜೇಮ್ಸ್ ನೀಶಮ್ ಮತ್ತು ಇಶ್ ಸೋಧಿ ತಲಾ ಎರಡು ವಿಕೆಟ್ ಪಡೆದುಕೊಂಡರು. ಸೀಫರ್ಟ್, ಫಿನ್ ಅಲೆನ್ ಭರ್ಜರಿ ಬ್ಯಾಟಿಂಗ್ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 13.1 ಓವರ್ ಗಳಲ್ಲೇ 5 ವಿಕೆಟ್ ಕಳೆದುಕೊಂಡು 137 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟಿಮ್ ಸೀಫರ್ಟ್ 22 ಎಸೆತಗಳಲ್ಲಿ 3 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 45 ರನ್ ಗಳಿಸಿ ಮಿಂಚಿದರು. ಫಿನ್ ಅಲೆನ್ ಕೂಡ 16 ಎಸೆತಗಳಲ್ಲಿ 1 ಬೌಂಡರಿ 5 ಸಿಕ್ಸರ್ ಸಹಿತ 38 ರನ್ ಗಳಿಸಿ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಒದಗಿಸಿದರು. ಮಾರ್ಕ್ ಚಾಪ್‌ಮನ್ 1 ರನ್, ಜೇಮ್ಸ್ ನೀಶಮ್ 5 ರನ್ ಗಳಿಸಿದರೆ, ಡೇರಿಲ್ ಮಿಚೆಲ್ 14 ರನ್ ಗಳಿಸಿದರು. ಮೈಕೆಲ್ ಅಜೇಯ 21 ರನ್ ಗಳಿಸಿದರೆ, ನಾಯಕ ಮಿಚೆಲ್ ಬ್ರೇಸ್‌ವೆಲ್ ಅಜೇಯ 5 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್‌ಗೆ ಸುಲಭ ಗೆಲುವು ತಂದುಕೊಟ್ಟರು.