Ad imageAd image

ಸ್ಥಾಪಿತ ಸಿದ್ಧಾಂತಗಳನ್ನು ಧಿಕ್ಕರಿಸಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ : ಮುಕುಂದರಾಜ್

Bharath Vaibhav
ಸ್ಥಾಪಿತ ಸಿದ್ಧಾಂತಗಳನ್ನು ಧಿಕ್ಕರಿಸಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ : ಮುಕುಂದರಾಜ್
WhatsApp Group Join Now
Telegram Group Join Now
ತುರುವೇಕೆರೆ : ದೇಶವನ್ನೇ ದೇವರು ಎಂದು ಪರಿಭಾವಿಸಿದ ಕುವೆಂಪು ಸಾಹಿತ್ಯ ಸರ್ವಕಾಲಿಕ ಶ್ರೇಷ್ಠ ಮೌಲ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸಿದ್ಧ ಮಾದರಿಗಳನ್ನು, ಸ್ಥಾಪಿತ ತತ್ವ, ಸಿದ್ಧಾಂತಗಳನ್ನು ಧಿಕ್ಕರಿಸಿ ಸತ್ಯಶೋಧನೆಯ ಮೂಲಕ ವೈಚಾರಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಗ್ಲೋಬೆಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಯೋಜನೆಯಡಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪಧ್ಬರಿತವಾಗಿದ್ದ, ಬೌದ್ಧಿಕವಾಗಿ ಪ್ರಬಲವಾಗಿದ್ದ ನಮ್ಮ ದೇಶದ ಮೇಲೆ ಸಾಲು ಸಾಲಾಗಿ ಪರಕೀಯರು ದಾಳಿ ಮಾಡಲು ಕಾರಣ ಇಲ್ಲಿನ ನಿಜವಾದ ಮೂಲನಿವಾಸಿಗಳನ್ನು  ಅವಿದ್ಯಾವಂತರನ್ನಾಗಿಸುವ ಮೂಲಕ ಅಸಹಾಯಕರನ್ನಾಗಿ ಮಾಡಿದ್ದು. ಬಹು ದೊಡ್ಡ ವರ್ಗವನ್ನು  ಶಿಕ್ಷಣದಿಂದ ದೂರ ಇಡಲಾಗಿತ್ತು. ಇವತ್ತು ನಮ್ಮ ಸಂವಿಧಾನ ಜಾತಿ, ಧರ್ಮ ಮೀರಿ ಶಿಕ್ಷಣ, ಸಮಾನ ಹಕ್ಕು, ಅವಕಾಶಗಳನ್ನು ನೀಡಿದೆ. ಯಾರು ಬೇಕಾದರೂ ಅಧಿಕಾರಶಾಹಿ, ಆಡಳಿತಶಾಹಿಯ ಅವಿಭಾಜ್ಯ ಅಂಗವಾಗಬಹುದು.  ಇಂತಹ ಶ್ರೇಷ್ಠ ಶಿಕ್ಷಣದ ಮೂಲಕ ಸದೃಢ ದೇಶವನ್ನು ನಿರ್ಮಿಸಬೇಕೇ ಹೊರತು ದೇವರು, ಧರ್ಮದ ಹೆಸರಿನಲ್ಲಿ ದೇಶವನ್ನು ಮತ್ತೆ ಕಂದಾಚಾರದ ಕೂಪಕ್ಕೆ ಕೊಂಡೊಯ್ಯಬಾರದು ಎಂದರು.
ಮುಖ್ಯ ಉಪನ್ಯಾಸ  ನೀಡಿದ ಡಾ. ಜ್ಯೋತಿ ಮಾತನಾಡಿ ‘ ಪ್ರತಿಪಾದಿತ ಜ್ಞಾನವೇ ಅಂತಿಮವಲ್ಲ, ಅದು ಸರ್ವಕಾಲಕ್ಕೂ ಪ್ರಶ್ನಿಸಬಲ್ಲದಾಗಿದ್ದರೆ ಮಾತ್ರ ಅದು ಕಾಲಾತೀತವಾದ ಶ್ರೇಷ್ಠತೆಯನ್ನು ಪಡೆಯುತ್ತದೆ. ವ್ಯವಸ್ಥೆ ಅಥವಾ ಸಮಾಜ ಒಂದು ಅಲೋಚನಾಕ್ರಮವನ್ನು ರೂಪಿಸುತ್ತದೆ.  ಅದನ್ನು ಮೀರಿದ ಸತ್ಯಶೋಧನೆಯ ಜಿಜ್ಞಾಸೆಯೇ ಸಂಶೋಧನೆಗೆ ಪ್ರೇರೇಪಿಸುತ್ತದೆ. ಸ್ಪಂದನೆಯ ಮೂಲಕವೇ ಒಂದು ವಸ್ತುವಿಷಯಕ್ಕೆ ಅರ್ಥ ಹುಟ್ಟಿಕೊಳ್ಳುತ್ತದೆ. ತನ್ನ ಅನುಭವ, ಕಲ್ಪನೆ, ಸ್ಮೃತಿಗಳ ಮೂಲಕ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು  ಅರ್ಥೈಸಬಹುದು.  ಬಹುಶಾಸ್ತ್ರೀಯ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ಭಾಷೆ ಮತ್ತು ಸಾಹಿತ್ಯ ಪ್ರಕಾರಗಳಲ್ಲಿ   ಹೊಸ ಹೊಸ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಅಕಾಡೆಮಿಯ ಸದಸ್ಯೆ ಸುಮಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಾಮೀಣ ಪ್ರದೇಶಗಳಲ್ಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರಿಂದ ಸ್ಥಳೀಯ ಭಾಷೆ, ಸಂಸ್ಕೃತಿಗಳ ಜೊತೆ ಸಾಹಿತ್ಯವನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಚಕೋರ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ತಾಲ್ಲುಕುಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಿಸಲಾಗಿದೆ ಎಂದ ಅವರು ಅಕಾಡೆಮಿಯ ವಿವಿಧ ಯೋಜನೆಗಳ ಪರಿಚಯ ಮಾಡಿಕೊಟ್ಟರು.
ಸಮಾರಂಭದಲ್ಲಿ ಎಲ್.ಎನ್. ಮುಕುಂದರಾಜ್, ಡಾ.ಜ್ಯೋತಿ,  ಚಕೋರ ಸಂಚಾಲಕ ಡಾ. ನಾಗಭೂಷಣ ಬಗ್ಗನಡು,  ಸುಮಾ ಸತೀಶ್ ಇವರನ್ನು ಸನ್ಮಾನಿಸಲಾಯಿತು. ಗ್ಲೋಬಲ್ ಎಂಬಸ್ಸಿ ಕಾಲೇಜಿನ ಸಂಸ್ಥಾಪಕ ಪ್ರೊ. ಗಂಗಾಧರ ದೇವರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ಎನ್. ರಾಮಯ್ಯ,ಬರಹಗಾರ ತುರುವೇಕೆರೆ ಪ್ರಸಾದ್, ಟಿ.ಎಚ್. ವಿಶ್ವಾರಾಧ್ಯ, ಉಪನ್ಯಾಸಕರಾದ ಬಸವರಾಜು, ಚಂದನ್,  ಶ್ವೇತಾ, ಮಂಜುಳಾ, ಉಪಸ್ಥಿತರಿದ್ದರು. ಅನುಶ್ರೀ ಸ್ವಾಗತಿಸಿದರು. ರೂಪಾ ವಂದಿಸಿದರು. ತುಳಸಿ ಕಾರ್ಯಕ್ರಮ ನಿರೂಪಸಿದರು.
ವರದಿ: ಗಿರೀಶ್ ಕೆ ಭಟ್
WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!