ತಿರುವಳ್ಳೂರು (ತಮಿಳುನಾಡು): ಕೃಷಿಯಲ್ಲಿ ತಾಳ್ಮೆ ಮುಖ್ಯ. ಹೀಗೆ ಅಡೇನಿಯಮ್ (Desert Ros) ಕೃಷಿ ಆರಂಭಿಸಿದ ಪ್ರಾರಂಭದ 20 ವರ್ಷಗಳ ಕಾಲ ತಾಳ್ಮೆಯಿಂದ ಕಾದು, ಇದೀಗ 20 ವರ್ಷಗಳಿಂದ ಬೆಳೆಗಾರ ಜಲಂಧರ್ ಅವರು ವಾರ್ಷಿಕ 60 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಚೆನ್ನೈನ ತಿರುವಳ್ಳೂರಿನಲ್ಲಿ ಅಡೇನಿಯಮ್ ಕೃಷಿ ಮಾಡುತ್ತಿರುವ ಜಲಂಧರ್ ಅವರ ತಾಳ್ಮೆಗೆ ಈಗ ಸಿಗುತ್ತಿರುವ ಲಾಭವೇ ಸಾಕ್ಷಿ.
ತಿರುವಳ್ಳೂರ್ ಜಿಲ್ಲೆಯಲ್ಲಿ, ಉತ್ತುಕ್ಕೊಟ್ಟೈ ತಾಲೂಕಿನಲ್ಲಿ ಈಸಾನಮ್ ಕುಪ್ಪಮ್ ಎಂಬ ಪ್ರದೇಶವಿದೆ. ಇಲ್ಲಿ, ಕಳೆದ 40 ವರ್ಷಗಳಿಂದ, ಜಲಂಧರ್ ಅವರು ಸುಮಾರು 15 ಎಕರೆ ಪ್ರದೇಶದಲ್ಲಿ ಡೆಸರ್ಟ್ ರೋಸ್ (ಅಡೆನಿಯಮ್) ಬೆಳೆಸಿ ಮಾರಾಟ ಮಾಡುತ್ತಿದ್ದಾರೆ.
ಬೇಸಿಗೆಯ ಸುಡುವ ಬಿಸಿಲಿನಲ್ಲೂ ಇವರ ಡೆಸರ್ಟ್ ರೋಸ್ ಗಿಡಗಳು ಭವ್ಯವಾಗಿ ನಳನಳಿಸುತ್ತಿವೆ. ಇವರ ತೋಟದಲ್ಲಿರುವ ಬಣ್ಣ ಬಣ್ಣಗಳ ನೂರಾರು ಅಡೇನಿಯಮ್ ಗಿಡಗಳನ್ನು ನೋಡುವುದೇ ಚೆಂದ. ಕೆಲವು ದೊಡ್ಡ, ಗಟ್ಟಿಮುಟ್ಟಾದ ಕಾಂಡಗಳನ್ನು ಹೊಂದಿದ್ದರೆ, ಇನ್ನೂ ಕೆಲವು ಚಿಕ್ಕ ಚಿಕ್ಕ ಸಸ್ಯಗಳು. 1986 ರಲ್ಲಿ ಈ ನರ್ಸರಿ ಕೃಷಿಯನ್ನು ಪ್ರಾರಂಭಿಸಿರುವ ಜಲಂಧರ್ ಅವರು ಡೆಸರ್ಟ್ ರೋಸ್ ಸಸ್ಯಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಇವರ ಬಳಿ ಒಟ್ಟು 450 ಸಸ್ಯ ಪ್ರಭೇದಗಳಿದ್ದು, ಪ್ರತಿ ಡೆಸರ್ಟ್ ರೋಸ್ ಗಿಡಗಳು ಮೂರು ವಿಭಿನ್ನ ಪ್ರಕಾರದ ಹೂವುಗಳನ್ನು ಬಿಡುತ್ತವೆ.
ವರ್ಷಕ್ಕೆ 50 ರಿಂದ 60 ಲಕ್ಷ ರೂ.ವರೆಗೆ ಗಳಿಸುತ್ತೇನೆ ಎಂದರು ಜಲಂಧರ್
ಸಸ್ಯಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. 20 ವರ್ಷಗಳ ಕಾಲ ಯಾವುದೇ ಲಾಭವಿಲ್ಲದೆ ಇದರ ಕೃಷಿ ಮಾಡಿದ್ದ ಜಲಂಧರ್ ಅವರು ನಂತರ ಗಿಡಗಳಿಂದ ಲಾಭ ಪಡೆಯಲು ಪ್ರಾರಂಭಿಸಿದರು. ಈ ಗಿಡಗಳಿಂದ ಲಾಭ ಗಳಿಸಲು ಸಮಯ ತೆಗೆದುಕೊಳ್ಳುತ್ತದೆ. ಕಸಿ ಮಾಡುವುದರಿಂದ ಒಂದೇ ಸಸ್ಯದಲ್ಲಿ ಬಹು ಬಣ್ಣದ ಹೂವುಗಳು ಅರಳುತ್ತವೆ. ಹೀಗಾಗಿ ಗಿಡಗಳ ಬೆಲೆ ಸ್ವಲ್ಪ ಹೆಚ್ಚಿರುತ್ತದೆ. ನಮ್ಮ ನರ್ಸರಿಯಲ್ಲಿ ಬೆಳೆಯುವ ಗಿಡಗಳನ್ನು ಕೇರಳ, ಗುಜರಾತ್, ಹಾಗೂ ದೆಹಲಿಯಂತಹ ರಾಜ್ಯಗಳಿಗೆ, ಹಾಗೂ ವಿದೇಶಗಳಿಗೆ ಮುಖ್ಯವಾಗಿ ದುಬೈನಂತಹ ಅರಬ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ತಿರುವಳ್ಳೂರು ಜಿಲ್ಲಾಧಿಕಾರಿ ಪ್ರತಾಪ್ ನಮ್ಮ ನರ್ಸರಿಗೆ ಭೇಟಿ ನೀಡಿ ಆಶ್ಚರ್ಯಗೊಂಡರು. ನಾನು ಈಗ ವರ್ಷಕ್ಕೆ 50 ರಿಂದ 60 ಲಕ್ಷ ರೂ.ವರೆಗೆ ಗಳಿಸುತ್ತೇನೆ ಎಂದರು ಜಲಂಧರ್.
ಈ ಬೆಳವಣಿಗೆಗೆ ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಅಡೆನಿಯಮ್ ಗಿಡಗಳನ್ನು ಬೇರು ಸಹಿತ ಕಿತ್ತು ಬಿಸಿಲಿಗೆ ಇಟ್ಟರೂ ಎರಡು ತಿಂಗಳುಗಳಲ್ಲಿ ಅವು ಚಿಗುರೊಡೆಯುತ್ತವೆ. ಮೂರು ಅಥವಾ ಆರು ತಿಂಗಳ ನಂತರ ಅದೇ ಗಿಡವನ್ನು ಮತ್ತೆ ನೆಟ್ಟು, ನೀರು ಹಾಕುವುರಿಂದ ಮತ್ತೆ ಹಿಂದಿನಂತೆಯೇ ಬೆಳೆಯುತ್ತದೆ. ಈ ಸಸ್ಯಗಳು ಬೇಗನೆ ಬಾಡುವುದಿಲ್ಲ ಮತ್ತು ಹೆಚ್ಚು ನೀರಿನ ಅಗತ್ಯವಿರುವುದಿಲ್ಲ ಎಂದು ಗಿಡಗಳ ಬಗ್ಗೆ ಮಾಹಿತಿ ನೀಡಿದರು.
ತಮಿಳುನಾಡು ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿಯಲ್ಲಿ 10.65 ಲಕ್ಷ ರೂ. ಸಬ್ಸಿಡಿಯಲ್ಲಿ 3000 ಚದರ್ ಮೀಟರ್ ಅಳತೆಯ ಪಾಲಿ ಹೌಸ್ ನಿರ್ಮಾಣ ಮಾಡಿಕೊಲಾಗಿದೆ. 15 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿರುವ ಈ ಡೆಸರ್ಟ್ ರೋಸ್ ಉದ್ಯಾನವನ್ನು ಅನ್ವೇಷಿಸಲು ಸಂದರ್ಶಕರಿಗೆ ಅವಕಾಶ ನೀಡಲು ವ್ಯವಸ್ಥೆಗಳು ನಡೆಯುತ್ತಿವೆ ಎಂದು ಜಲಂಧರ್ ತಿಳಿಸಿದರು.