Ad imageAd image
- Advertisement -  - Advertisement -  - Advertisement - 

ಹದಗೆಟ್ಟ ಸಂಚಾರಿ ವ್ಯವಸ್ಥೆ, ಜನರ ಜೀವಕ್ಕಿಲ್ಲ ರಕ್ಷಣೆ

Bharath Vaibhav
ಹದಗೆಟ್ಟ ಸಂಚಾರಿ ವ್ಯವಸ್ಥೆ, ಜನರ ಜೀವಕ್ಕಿಲ್ಲ ರಕ್ಷಣೆ
WhatsApp Group Join Now
Telegram Group Join Now

ತುರುವೇಕೆರೆ: -ಪಟ್ಟಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಸಹ ಸಂಚಾರ ವ್ಯವಸ್ಥೆ ಮಾತ್ರ ಇನ್ನಿಲ್ಲದಂತೆ ಹದಗೆಟ್ಟಿದೆ. ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಂದ ಪಾದಚಾರಿಗಳು, ವಾಹನ ಸಂಚಾರರು ಜೀವಭಯದಿಂದ ಸಂಚರಿಸುವಂತಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಕಾನೂನು ಭಾರಿ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ವರ್ತಕರ ಸ್ವಹಿತಾಸಕ್ತಿ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರಾಸಕ್ತಿ, ನಿರ್ಲಕ್ಷ್ಯದ ನಡುವೆ ಪಟ್ಟಣದ ಜನತೆಯ ಜೀವಕ್ಕೆ ರಕ್ಷಣೆಯಿಲ್ಲದಂತಾಗಿದೆ.

ಪಟ್ಟಣದ ಹೃದಯಭಾಗವೆನಿಸಿರುವ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಸಾರ್ವಜನಿಕರು ನೆಮ್ಮದಿಯಾಗಿ ಓಡಾಡಲು ಕಷ್ಟಸಾಧ್ಯವಾಗಿದೆ. ಸಂತೆ ನಡೆಯುವ ಸೋಮವಾರವಂತೂ ಕೇಳುವ ಹಾಗೇ ಇಲ್ಲ. ದಬ್ಬೇಘಟ್ಟ ರಸ್ತೆಯಲ್ಲಿ ಮುಖ್ಯ ಸಾರಿಗೆ ಬಸ್ ನಿಲ್ದಾಣವಿದ್ದರೂ ಪಟ್ಟಣದ ಹೃದಯಭಾಗದಲ್ಲಿ ಮೂರು ಉಪನಿಲ್ದಾಣ ಸೃಷ್ಟಿಯಾಗಿ ಸಂಚಾರ ವ್ಯವಸ್ಥೆ ನಿಯಂತ್ರಣ ಮಾಡಲಾಗದಷ್ಟು ಗಬ್ಬೆದ್ದು ಹೋಗಿದೆ. ಹಳೇ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಪ್ರಮುಖ ವ್ಯಾಪಾರ ವಹಿವಾಟಿನ ಸ್ಥಳವಾಗಿದೆ.

ತಾಲೂಕು ಕಛೇರಿ (ಮಿನಿ ವಿಧಾನಸೌಧ) ಹೃದಯಭಾಗದಲ್ಲೇ ಇರುವುದರಿಂದ ಹಳ್ಳಿಗಳ ರೈತರು, ನಾಗರೀಕರು ಪ್ರತಿನಿತ್ಯ ಕೆಲಸಕಾರ್ಯಗಳಿಗೆ ಬರುತ್ತಾರೆ. ಬೀದಿ ಬದಿಯ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುವ ಪಟ್ಟಣ ಪಂಚಾಯ್ತಿ ವ್ಯಾಪಾರಸ್ಥರಿಗಾಗಿ ಸಂತೆ ಮೈದಾನದಲ್ಲಿ ಜಾಗದ ವ್ಯವಸ್ಥೆ ಮಾಡಿದೆ, ಆದರೆ ಅಲ್ಲಿಗೆ ಹೋಗಲು ಬೀದಿಬದಿ ವ್ಯಾಪಾರಸ್ಥರು ಸಿದ್ದರಿಲ್ಲ. ಈ ಕಾರಣದಿಂದಲೇ ವಾಣಿಜ್ಯ ಸಂಕೀರ್ಣವೂ ಕಾರ್ಯಾರಂಭ ವಿಳಂಬವಾಗುತ್ತಲೇ ಇದೆ.

ಇನ್ನು ಟ್ರಾಫಿಕ್ ಸಮಸ್ಯೆ. ನೋ ಪಾರ್ಕಿಂಗ್ ಎಂಬ ನಾಮಫಲಕ ಹೆಸರಿಗೆ ಮಾತ್ರ. ನಾಮಫಲಕದ ಕೆಳಗೇ ವಾಹನಗಳ ಕಾರುಬಾರು. ಇದನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವದರಿಂದ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಪೋಲೀಸರು ನೋಡಿದರೂ ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾರೆನ್ನುವುದು ಜನತೆಯ ದೂರು. ಪಾದಚಾರಿಗಳು ಓಡಾಡಲು ಇರುವ ಫುಟ್ಪಾತ್ ಮೇಲೆ ವಾಹನಗಳ ಪಾರ್ಕಿಂಗ್, ಅಂಗಡಿಗಳವರ ಬೋರ್ಡ್ಗಳು, ಸಾಮಾನುಗಳ ದರ್ಬಾರು ನಡೆಯುತ್ತಿದೆ. ಫುಟ್ಬಾತ್ ಮೇಲೆ ಪಾದಚಾರಿಯೊಬ್ಬ ಜೀವ ಉಳಿಸಿಕೊಂಡು ಹೋಗುವುದು ಸಾಧನೆಯಾಗಿದೆ. ಸಂಚಾರ ವ್ಯವಸ್ಥೆಯನ್ನು ಹತೋಟಿಗೆ ತರಲಾಗದೆ, ಶಿಫಾರಸ್ಸಿನ ಭೂತಕ್ಕೆ ಅಸಹಾಯಕರಾಗಿ ಪೋಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ.

ದಬ್ಬೇಘಟ್ಟ ರಸ್ತೆಯಲ್ಲಿನ ಸಂಚಾರ ಯಮಸದೃಶ್ಯವಾಗಿದೆ. ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಹದಗೆಟ್ಟಿದ್ದರೂ ಜನತೆ ಜೀವಭಯದಿಂದ ಓಡಾಡುತ್ತಿದ್ದರೂ ಐಶಾರಾಮಿ ವಾಹನಗಳಲ್ಲಿ ಸಂಚರಿಸುವ ಜನಪ್ರತಿನಿಧಿಗಳಿಗೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೋಲೀಸರಿಗೆ ಜನಸಾಮಾನ್ಯರ ಸಂಕಷ್ಟಗಳು ಕಾಣದಿರುವುದು ಶೋಚನೀಯ ಸಂಗತಿಯಾಗಿದೆ. ಕೂಡಲೇ ಪಟ್ಟಣದ ಸಂಚಾರ ದಟ್ಟಣೆ ಸಮಸ್ಯೆಯನ್ನು ಜನಪ್ರತಿನಿಧಿಗಳು, ಪೋಲೀಸ್ ಇಲಾಖೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕುಳಿತು ಚರ್ಚಿಸಿ ಬಗೆಹರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!