ಹಾಸನ: ಕಾಶ್ಮೀರದಲ್ಲಿ ಪ್ರವಾಸಿಗರನ್ನು ಕಗ್ಗೊಲೆ ಮಾಡಿದ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಭಯೋತ್ಪಾದನೆಯನ್ನು ನಾಶ ಮಾಡುವವರೆಗೂ ನಾವು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡ, ನಮ್ಮ ದೇಶದ ಕಾಶ್ಮೀರದಲ್ಲಿ 28 ಜನರನ್ನು ಹತ್ಯೆ ಮಾಡಿದ್ದಾರೆ. ಕಾಶ್ಮೀರವನ್ನು ಸ್ವರ್ಗಕ್ಕೆ ಸಮ ಎನ್ನುತ್ತಾರೆ. ಅಲ್ಲಿಗೆ ಹೋಗಿದ್ದ ಪ್ರವಾಸಿಗರನ್ನು ನಿಷ್ಕರುಣೆಯಿಂದ ಹತ್ಯೆ ಮಾಡಿದ್ದಾರೆ. ಅವರು ಎಲ್ಲೇ ಅಡಗಿದ್ದರೂ ಅವರನ್ನು ಹೊರತಂದು ಶಿಕ್ಷೆ ಕೊಡುವವರೆಗೆ ನಾನು ಬಿಡುವುದಿಲ್ಲ ಎಂದು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ ಎಂದರು.
ಪ್ರಧಾನಿಗಳು ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ. ಭಯೋತ್ಪಾದನೆಯನ್ನು ನಾಶಮಾಡಲು ಅವರು ತೆಗೆದುಕೊಳ್ಳುವ ಯಾವುದೇ ಕ್ರಮಗಳಲ್ಲಿ ನಮ್ಮ ಬೆಂಬಲ ಪ್ರಧಾನಿಯೊಂದಿಗೆ ಇದೆ ಎಂದು ಹೇಳಿದರು.