ಮುಂಬೈ : ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ಹಾಗೂ ತ್ರಿಭಾಷಾ ಸೂತ್ರ ಜಾರಿ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರ ಜಾರಿ ಮಾಡುವುದಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಇಂದು ತ್ರಿಭಾಷಾ ನೀತಿಯ ಕುರಿತಾದ ಸರ್ಕಾರಿ ನಿರ್ಣಯಗಳನ್ನು ರದ್ದುಗೊಳಿಸಿದೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಷಾ ಸೂತ್ರ ಅನುಷ್ಠಾನದ ಕುರಿತು ಸಮಿತಿ ರಚಿಸಿದ್ದಾರೆ.
ಪದೇ ಪದೇ ತ್ರಿಭಾಷಾ ಸೂತ್ರದ ಬಗ್ಗೆ ಮಾತನಾಡುವ ಉದ್ಧವ್ ಠಾಕ್ರೆ, 1ನೇ ತರಗತಿಯಿಂದ ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ಕುರಿತು ಮಾಶೇಲ್ಕರ್ ಸಮಿತಿಯ ಸಲಹೆಗಳನ್ನು ಒಪ್ಪಿಕೊಂಡಿದ್ದರು’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
ಜೂನ್ 27 ರ ಶುಕ್ರವಾರದಂದು, ಮರಾಠಿ ಭಾಷೆಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುವ ಭಾಷಾ ಸಲಹಾ ಸಮಿತಿಯು, ಹಿಂದಿ ಸೇರಿದಂತೆ ಯಾವುದೇ ಮೂರನೇ ಭಾಷೆಯನ್ನು 5ನೇ ತರಗತಿಯ ಮೊದಲು ಕಲಿಸಬಾರದು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
ತ್ರಿಭಾಷಾ ಸೂತ್ರಕ್ಕೆ ಮಿತ್ರಪಕ್ಷಗಳ ವಿರೋಧ
ವಿಧಾನಸಭೆಯ ಮುಂಗಾರು ಅಧಿವೇಶನದ ಮುನ್ನಾದಿನ ಮಾತನಾಡಿರುವ ಡಿಸಿಎಂ ಅಜಿತ್ ಪವಾರ್, ‘ಒಂದನೇ ತರಗತಿಯಿಂದಲೇ ಹಿಂದಿ ಕಲಿಕೆ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ. ಆದರೆ, 5ನೇ ತರಗತಿಯಿಂದ ಮೂರನೇ ಭಾಷೆ ಆಯ್ಕೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀರ್ಮಾನಿಸಬಹುದು’ ಎಂದಿದ್ದಾರೆ. ಹಾಗೆಯೇ, ‘1ನೇ ತರಗತಿಯಿಂದ ನಾವು ಹಿಂದಿ ಹೇರಿಕೆ ಪರವಾದ ನಿಲುವು ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಹಿಂದಿ ಭಾಷೆ ಕಲಿಕೆ ಕಡ್ಡಾಯವಿಲ್ಲ. ಆಯಾ ರಾಜ್ಯದ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಕಲಿಯಬೇಕು ಎಂಬುದರಲ್ಲಿ ನಂಬಿಕೆ ಹೊಂದಿದ್ದೇವೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುವವರು ಮರಾಠಿ ಭಾಷೆ ಕಲಿಯುವುದು ಕಡ್ಡಾಯವಾಗಿದೆ.
ಐದನೇ ತರಗತಿಯಿಂದ ಹಿಂದಿ ಕಲಿಯುವ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆಲೋಚಿಸಿ, ನಿರ್ಧಾರ ಕೈಗೊಳ್ಳಬೇಕು’ ಎಂದು ಪವಾರ್ ಹೇಳಿದ್ದರು.




