ಮಿಟ್ಟೆಸೂಗೂರಿನಲ್ಲಿ ಗ್ರಾಮದಲ್ಲಿ ಶ್ರೀ ಮಾರಿಕಾಂಭೆ ರಥ ಎಳೆದ ಮಹಿಳೆಯರು.
ಸಿರುಗುಪ್ಪ : ತಾಲೂಕಿನ ಮಿಟ್ಟೆಸೂಗೂರು ಗ್ರಾಮದಲ್ಲಿ ದೇವಿ ಪುರಾಣ ಪ್ರವಚನ ಮಹಾಮಂಗಲ ಹಾಗೂ ಶ್ರೀ ಮಾರಿಕಾಂಬೆ ದೇವಿಯ ರಥೋತ್ಸವ ಶನಿವಾರ ಸಾಯಂಕಾಲ ಅದ್ದೂರಿಯಿಂದ ಜರುಗಿತು.
ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಫಲಪುಷ್ಪಗಳು, ಆಭರಣಗಳ ಅಲಂಕಾರ, ಸಾಮೂಹಿಕವಾಗಿ ಮುತ್ತೈದೆಯರಿಗೆ ಉಡಿತುಂಬುದು. ಕುಂಭೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹಲವು ವರ್ಷಗಳಿಂದಲೂ ನಡೆದುಕೊಂಡಿರುವ ರಥೋತ್ಸವದಲ್ಲಿ ಪುರುಷರು ಪಲ್ಲಕ್ಕಿ ಸೇವೆ, ಉಚ್ಚಾಯದಲ್ಲಿ ಭಾಗಿಯಾದರೆ ಮಹಿಳೆಯರೇ ರಥವನ್ನು ಎಳೆಯುವುದು ಇಲ್ಲಿನ ವಿಶೇಷವಾಗಿದೆ.
ಎಲ್ಲೆಡೆ ರಥೋತ್ಸವದಲ್ಲಿ ಪುರುಷರು ರಥವನ್ನು ಎಳೆಯುವುದು ಸಂಪ್ರದಾಯವಾದರೆ ಈ ಗ್ರಾಮದಲ್ಲಿ ಮಾತ್ರ ಶ್ರೀ ಮಾತೆ ಮಾರಿಕಾಂಬೆ ದೇವಿಯ ರಥವನ್ನು ಎಳೆಯಲು ಪ್ರತಿಯೊಂದು ಮನೆಯಲ್ಲಿನ ಮಹಿಳೆಯರು ಪಾಲ್ಗೊಳ್ಳುತ್ತಾರೆ.
ನವರಾತ್ರಿ ದಿನದಿಂದ ಆರಂಭವಾಗುವ ಶ್ರೀ ದೇವಿ ಪುರಾಣ ಪ್ರವಚನ ಮಹಾಮಂಗಲ ಹಾಗೂ ವಿಜಯದಶಮಿಯಂದು ನಡೆಯುವ ರಥೋತ್ಸವದ ನಿಮಿತ್ತ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಇಡೀ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು.
ಗ್ರಾಮದ ಹಿರಿಯರಾದ ವೆಂಕಟರೆಡ್ಡಿ ಮಾತನಾಡಿ ನಮ್ಮ ಪೂರ್ವಜರ ದೇವಿಯ ಆಶೀರ್ವಾದದಿಂದ ರಥೋತ್ಸವವನ್ನು ಆಚರಿಸುತ್ತಾ ಬರಲಾಗಿದೆ.
ರಥೋತ್ಸವವಕ್ಕೆ ಸುತ್ತಲಿನ ಗ್ರಾಮದಲ್ಲಿ ರಾವಿಹಾಳ್, ಬೊಮ್ಮಲಾಪುರ, ಕೊತ್ತಲಚಿಂತ, ಅಗಸನೂರು, ಇನ್ನಿತರ ಗ್ರಾಮಗಳ ಭಕ್ತವೃಂದವು ಪಾಲ್ಗೊಳುತ್ತಾರೆಂದು ತಿಳಿಸಿದರು.
ಹಿರೆಮಲ್ಲೂರು ಶಿವಮೂರ್ತಿ ಶಾಸ್ತ್ರಿಗಳ ಪ್ರವಚನದಲ್ಲಿ ಜೇರಟಗಿ ಶರಣಕುಮಾರ ಗವಾಯಿಗಳು ಸುಗಮ ಸಂಗೀತವನ್ನು, ವಿಜಯಪುರ ಜಿಲ್ಲೆಯ ಚನ್ನಬಸವ ಅವರು ತಬಲ ಸಾಥ್ ನೀಡಿದರು.
ಇದೇ ವೇಳೆ ಪುರಾಣ ಸಮಿತಿ ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷ ಅಂಬಣ್ಣ, ಕಾರ್ಯದರ್ಶಿ ಆಂಜನೇಯ್ಯ, ಖಜಾಂಚಿ ವೀರೇಶ ಹಾಗೂ ಸದ್ಭಕ್ತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ