ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರು ಕಾಫಿ ಕುಡಿಯುತ್ತಿರುವುದು ಹಾಗೂ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಇದರಿಂದ ಕೂಡಲೇ ಎಚ್ಚೆತ್ತ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಪ್ರಕರಣದ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ.
ತನಿಖೆಗೆ ಆದೇಶಿಸಿದ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಅವರು ಇದೀಗ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದು, ಸಂಪೂರ್ಣವಾಗಿ ತನಿಖೆ ನಡೆಸಿದ ಬಳಿಕ ಕಾರಾಗೃಹದ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಮಾಹಿತಿ ಮೇರೆಗೆ ದಾಳಿ ಮಾಡಿದರು. ಈ ವೇಳೆ ವಿಚಾರಣಾಧೀನ ಕೈದಿಯಾದ ವೇಲು ಎಂಬಾತ ನಟ ದರ್ಶನ್, ರೌಡಿಶೀಟರ್ ಆದ ವಿಲ್ಸನ್ ಗಾರ್ಡನ್ ನಾಗ, ಪ್ರಕರಣದ 11ನೇ ಆರೋಪಿಯಾಗಿರುವ ನಾಗರಾಜ್ ಹಾಗು ಇನ್ನೊಬ್ಬ ವ್ಯಕ್ತಿಯ ಜೊತೆ ನಟ ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋವನ್ನು ತೆಗೆದುಕೊಂಡಿದ್ದ.
ಅದಾದ ಬಳಿಕ ವೇಲು ತಾನು ತನ್ನ ಮೊಬೈಲ್ ನಲ್ಲಿ ತೆಗೆದುಕೊಂಡಿರುವಂತಹ ಫೋಟೋವನ್ನು ತನ್ನ ಹೆಂಡತಿಗೆ ಕಳುಹಿಸಿದ್ದಾನೆ. ಅದಾದ ಬಳಿಕ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹಾಗಾಗಿ ಜೈಲಿನಲ್ಲಿ ಇದಕ್ಕೆಲ್ಲ ಅವಕಾಶ ಇದೆಯ? ಅಥವಾ ಜೈಲಿನ ಸಿಬ್ಬಂದಿಗಳೇ ಇದರಲ್ಲಿ ಶಾಮೀಲಾಗಿದ್ದಾರಾ? ವೇಲುಗೆ ಮೊಬೈಲ್ ಹೇಗೆ ಸಿಕ್ತು? ಎಂಬುದರ ಕುರಿತಾಗಿ ಇದೀಗ ಇಲಾಖೆಯ ಬಿಜೆಪಿ ಮಾಲಿನಿ ಕೃಷ್ಣಮೂರ್ತಿಯವರು ತನಿಖೆಗೆ ಆದೇಶಿಸಿ ವರದಿ ನೀಡುವಂತೆ ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.