ಇಳಕಲ್:- ನಗರ ಸೇರಿದಂತೆ ತಾಲೂಕಿನ ವಿವಿಧ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬಿ ಮತ್ತು ಶೇಖರಗೌಡ ರಾಮತ್ನಾಳ ಶುಕ್ರವಾರದಂದು ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಗರದ ಕನ್ನಡ ಕಟ್ಟೆಯ ಹತ್ತಿರ ಇರುವ ಅಂಜುಮನ್ ಅರೇಬಿಕ್ ಜೋಡಮಸಜಿದ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಕಡತಗಳನ್ನು ಮತ್ತು ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.
ನಂತರ ಅನಧಿಕೃತವಾಗಿ ಟ್ಯೂಶನ್ ಕ್ಲಾಸುಗಳನ್ನು ನಡೆಸುವ ಹಲವಾರು ಸಂಸ್ಥೆಗಳಿಗೆ ಭೇಟಿ ನೀಡಿ ಅವುಗಳ ಜನುಮವನ್ನು ಜಾಲಾಡಿದ ಅಧಿಕಾರಿಗಳಿಗೆ ಕಂದಗಲ್ಲ ಗ್ರಾಮದ ರಸ್ತೆಯ ಮಾರ್ಗವಾಗಿ ಹೋಗುವಾಗ ಬಾಲಕನೊಬ್ಬ ಕುರಿ ಕಾಯುತ್ತಿರುವದನ್ನು ಕಂಡು ಆ ಮಗುವನ್ನು ತಮ್ಮ ಬಳಿ ಕರೆದುಕೊಂಡು ಅವನನ್ನು ಆತ್ಮೀಯವಾಗಿ ಮಾತನಾಡಿಸಿ ಶಾಲೆಗೆ ಹೋಗುವುದನ್ನು ಬಿಟ್ಟು ಕುರಿ ಯಾಕೆ ಕಾಯುತ್ತಿದ್ದಿಯಾ ಎಂದು ಕೇಳಿದರು.
ನಂತರ ಅಲ್ಲಿಯೇ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಅವರಿಗೆ ಬಾಲಕನನ್ನು ಶಾಲೆಗೆ ಸೇರಿಸುವಂತೆ ಆತನ ಪಾಲಕರ ಮೇಲೆ ಒತ್ತಡ ತನ್ನಿ ಎಂದು ಹೇಳಿದರು.ಬಾಲಕ ಇಳಕಲ್ಲ ಅಲಂಪೂರಪೇಟೆಯ ಕೊರವರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು ಆಯೋಗದ ಸದಸ್ಯರು ಬಾಲಕನನ್ನು ಶಾಲೆಗೆ ಕರೆದುಕೊಂಡು ಬಂದು ಅಲ್ಲಿ ಮುಖ್ಯ ಗುರುಗಳ ಜೊತೆಗೆ ಮಾತನಾಡಿ ಶಾಲೆಗೆ ಸೇರಿಸಿದರು.
ನಂತರ ನಗರದಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಈ ಸಮಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ , ಜಿಲ್ಲಾ ಸಂಯೋಜನಾಧಿಕಾರಿ ಅಮರೇಶ ಎಚ್, ತಾಲೂಕಾ ವಸತಿ ನಿಲಯದ ಮೇಲ್ವಿಚಾರಕ ಸಂಗಮೇಶ ಗಡೇದ, ಸಿಡಿಪಿಓ ಗಿರಿತಿಮ್ಮಣ್ಣನವರ, ಡಿಎಚ್‌ಓ ಅಂಗಡಿ, ಮಲ್ಲಿಕಾರ್ಜುನ ಕಟ್ಟಿಮನಿ, ಪಿಎಸ್ ಐ ಎಸ್.ಆರ್.ನಾಯಕ ಮತ್ತಿತರ ಅಧಿಕಾರಿಗಳು ಇದ್ದರು.
ವರದಿ ದಾವಲ್ ಶೇಡಂ