ಬೆಳಗಾವಿ : ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದರೆ ಇಡೀ ರಾಜ್ಯದಲ್ಲಿ ನಿಮಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ, ಇದು ನನ್ನ ಪ್ರತಿಜ್ಞೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಇಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರಿಂದ ಗೋ..ಗೋ..ಪಾಕಿಸ್ತಾನ ಎಂದು ಘೋಷಣೆ ಕೂಗಿ ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರೇ ಕೇಳಿಸಿಕೊಳ್ಳಿ… ನಿಮ್ಮ ಕಾರ್ಯಕರ್ತರಿಗೆ ಕಂಟ್ರೋಲ್ನಲ್ಲಿಡಿ. ಇಲ್ಲವಾದಲ್ಲಿ ಒಂದೇ ಒಂದು ಸಭೆ ಮಾಡಲು ನಿಮಗೆ ಬಿಡಲ್ಲ. ನಿಮಗಿಂತ ನಮಗೂ ಚೆನ್ನಾಗಿ ಕಾರ್ಯರೂಪ ಮಾಡಲು ಬರುತ್ತದೆ. ಇದು ನಿಮಗೆ ನೆನಪಿರಲಿ. ಬಿಜೆಪಿ ಕಾರ್ಯಕರ್ತರಿಗೆ ಬುದ್ದಿ ಹೇಳಿದರೆ ಸರಿ. ಈ ಪ್ರವೃತ್ತಿ ನಮ್ಮ ಬಳಿ ನಡೆಯಲ್ಲ ನೆನಪಿರಲಿ ಎಂದು ಗುಡುಗಿದರು.
ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಪಕ್ಷದ ಅಧ್ಯಕ್ಷರು ಈಗಾಗಲೇ ವಾರ್ನಿಂಗ್ ಮಾಡಿದ್ದಾರೆ. ನಮಗೂ ಅಪಾರ ಅಭಿಮಾನಿಗಳಿದ್ದಾರೆ, ಕಾರ್ಯಕರ್ತರೂ ಇದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಬಿಜೆಪಿಯವರು ಈ ರೀತಿ ಮಾಡಿದರೆ ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.