ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿ ಇರುವಾಗಲೇ ಅವರ ಅನುಪಸ್ಥಿತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆಸಲಾಗಿದೆ.
ಕುತೂಹಲಕಾರಿ ವಿಚಾರವೆಂದರೆ ಈ ಒಂದು ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 35 ಶಾಸಕರು, 7 ಸಚಿವರು ಭಾಗಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು.
ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ್ದಾಗಿ ಸತೀಶ್ ಜಾರಕಿಹೊಳಿ ಕಚೇರಿ ಮೂಲಗಳು ಸ್ಪಷ್ಟಪಡಿವೆ.
ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿದೆ. ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗಿಯಾಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.