ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ (ಹಳೇ) ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಾರ್ತೀಕ ಮಾಸದ ಕೊನೆ ಶನಿವಾರದ ನಿಮಿತ್ತ ಸಾಯಂಕಾಲ ದೀಪೋತ್ಸವ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ಜರುಗಿತು.
ದೇವಸ್ಥಾನದಲ್ಲಿನ ವಿವಿಧ ದೇವ-ದೇವತೆಗಳ ವಿಗ್ರಹಗಳಿಗೆ ವಿವಿಧ ಆಭರಣಗಳು, ಫಲಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿ ಪೂಜೆ ಸಲ್ಲಿಸಲಾಯಿತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟಿನ ಕಾರ್ಯದರ್ಶಿ ಕೋಟಿರೆಡ್ಡಿ ಅವರು ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತರ ಶ್ರೇಯೋಭಿವೃದ್ದಿ, ನಾಡಿನ ಒಳಿತಿಗಾಗಿ, ದೇಶವನ್ನು ಹಗಲಿರುಳು ರಕ್ಷಣೆ ಮಾಡುತ್ತಿರುವ ಯೋದರ ಲೋಕ ಕಲ್ಯಾಣಾರ್ಥವಾಗಿ ಕಳೆದ 37 ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ.
ನವೆಂಬರ್ 2 ರಿಂದ ಇಲ್ಲಿಯವರೆಗೂ ಪ್ರತಿನಿತ್ಯ ಸಾಯಂಕಾಲ ಈ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆಂದು ತಿಳಿಸಿದರು.
ದೀಪೋತ್ಸವ ನಿಮಿತ್ತ ಸೇವೆ ಸಲ್ಲಿಸಿದ ಸೇವಾ ಪ್ರತಿನಿಧಿಗಳಿಗೆ, ದಾನಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ವೇಳೆ ದೇವಸ್ಥಾನ ಟ್ರಸ್ಟಿನ ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಭಕ್ತರು ಇದ್ದರು.
ವರದಿ .ಶ್ರೀನಿವಾಸ ನಾಯ್ಕ