ರಾಮದುರ್ಗ: ಗದುಗಿನ ಸದ್ಗುರು ಶಿವಾನಂದ ಸ್ವಾಮೀಜಿಗಳು ನವಲಗುಂದ ಅಜಾತ ನಾಗಲಿಂಗ ಶ್ರೀ ಕೃಪಾದೃಷ್ಟಿಯಿಂದ ಜನಿಸಿದವರು ಎಂದು ನವಲಗುಂದ ನಾಗಲಿಂಗ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಶಿವಪೇಠ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ಅಜಾತನಾಗಲಿಂಗ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯ ಸನ್ನಿದಾನ ವಹಿಸಿ ಮಾತನಾಡುತ್ತಾ,ಶ್ರೀ ಶಿವಾನಂದರು ಬಾಲ್ಯಾವಸ್ಥೆಯಲ್ಲಿ ಮೌನಿಗಳಾಗಿದ್ದರು.
ಶ್ರೀ ಶಿವಾನಂದರ ಮೌನವು ಅವರ ಒಂಭತ್ತು ವರ್ಷ ವಯಸ್ಸಿನವರೆಗೆ ಮುಂದುವರಿಯಿತು. ಆಗ ಅವರು ತಮ್ಮ ಸ್ವರೂಪದ ಅಭ್ಯಾಸದಲ್ಲಿ ತೊಡಗಿದ್ದರು. ಒಮ್ಮೆ ಶ್ರೀ ನಾಗಲಿಂಗ ಸ್ವಾಮಿಗಳು ಸಮೀಪದ ಬಡಿಗೇರ ಶಾಲೆಯಲ್ಲಿಯ ಬಾಚಿಯನ್ನು ತೆಗೆದುಕೊಂಡು ಅದನ್ನು ಶ್ರೀ ಶಿವಾನಂದರಿಗೆ ತೋರಿಸಿ ಅದರಿಂದ ಶ್ರೀ ಶಿವಾನಂದರ ಶರೀರವನ್ನು ಚೂರುಚೂರಾಗಿ ಕತ್ತರಿಸಿ ಹಾಕುವರೆಂದು ಹೇಳಿದರು.
ಆಗ ಶ್ರೀ ಶಿವಾನಂದರು ಎಳ್ಳಷ್ಟೂ ಹೆದರದೆ ತಮ್ಮ ಕುತ್ತಿಗೆಯನ್ನು ಬಗ್ಗಿಸಿ ‘ಅದನ್ನು ಬಾಚಿಯಿಂದ ಕಡಿದು ಹಾಕಿರಿ, ಇಲ್ಲದ ವಸ್ತು ಇಲ್ಲದಂತಾಗುತ್ತದೆ’ ಎಂದು ಹೇಳಿದರು. ಈ ಘಟನೆಯು ಶ್ರೀ ಶಿವಾನಂದರು ಸಂಪೂರ್ಣ ನಿರ್ಭಯರಾಗಿದ್ದರೆಂಬುದನ್ನು ಸೂಚಿಸುತ್ತದೆ ನಾವು ನಿವೆಲ್ಲರೂ ಅವರ ಸನ್ಮಾರ್ಗದಲ್ಲಿ ನಡೆಯೋಣ ಎಂದು ಕರೆ ನೀಡಿದರು.
ನಿತ್ಯ ತಿಂಗಳ ಪರ್ಯಂತರ ಅಜಾತ ನಾಗಲಿಂಗ ಸ್ವಾಮೀಜಿಗಳ ಪ್ರವಚನವನ್ನು ಶ್ರೀ ಕಾಡಸಿದ್ದೇಶ್ವರ ಗುರೂಜಿ ಹೇಳಿದರು.
ಶಿವಪೇಠ ಗ್ರಾಮದ ಸದ್ಭಕ್ತರಿಂದ ನವಲಗುಂದ ನಾಗಲಿಂಗ ಸ್ವಾಮಿಗಳ ಮಠದ ಶ್ರೀ ವೀರೇಂದ್ರ ಸ್ವಾಮೀಜಿಗಳಿಗೆ ಸನ್ಮಾನಿಸಲಾಯಿತು. ಪತ್ರಕರ್ತರಾದ ಎಸ್ ಆರ್ ಗುರುಬಸಣ್ಣವರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.




