ತುರುವೇಕೆರೆ:-ಮಗುವಿಗೆ ತಾಯಿ ಎದೆ ಹಾಲು ನೀಡುವುದರಿಂದ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ವತಿಯಿಂದ ಆಯೋಜಿಸಿದ್ದ ಸ್ತನ್ಯಪಾನ ದಿನಾಚರಣೆಯಲ್ಲಿ ತಾಯಿ ಮಗುವಿಗೆ ಮಡಿಲು ಕಿಟ್ ವಿತರಿಸಿ ಮಾತನಾಡಿದ ಅವರು, ಎದೆ ಹಾಲನ್ನು ಮಗುವಿಗೆ ನೀಡುವುದರಿಂದ ತಾಯಿ ಹಾಗೂ ಮಗುವಿನ ನಡುವೆ ಬಾಂದವ್ಯವನ್ನು ವೃದ್ದಿ ಮಾಡುತ್ತದೆ. ತಾಯಿಯ ಎದೆಹಾಲಿನಲ್ಲಿ ರೋಗನಿರೋಧಕ ಶಕ್ತಿಯಿದೆ. ಎದೆಹಾಲು ನೀಡುವುದರಿಂದ ಸೌಂದರ್ಯ ಹಾಳಾಗುತ್ತದೆ ಸೇರಿದಂತೆ ಕೆಲವು ಮೂಢನಂಬಿಕೆಗಳಿಂದ ತಾಯಂದಿರು ತನ್ನ ಮಗುವಿಗೆ ಎದೆಹಾಲನ್ನು ಕೊಡುವುದನ್ನು ಕೆಲವೇ ತಿಂಗಳಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಮಗುವಿನ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶದ ಕೊರತೆ ಉಂಟಾಗಿ ಮಗು ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಆದ್ದರಿಂದ ತಪ್ಪುಕಲ್ಪನೆಗಳನ್ನು ಬದಿಗಿಟ್ಟು ತಾಯಂದಿರು ತಮ್ಮ ಮಗುವಿಗೆ ಎದೆಹಾಲು ನೀಡಬೇಕೆಂದರು.
ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ ಮಾತನಾಡಿ, ತಾಯಂದಿರಿಗೆ ಸ್ತನ್ಯಪಾನದ ಮಹತ್ವ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ತಾಯಂದಿರು ಗರ್ಭಾವಸ್ಥೆಯಲ್ಲಿದ್ದಾಗಲೇ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಆರೋಗ್ಯವಂತ ಮಗುವಿನ ಜನನಕ್ಕೆ ಕಾರಣವಾಗಬೇಕು. ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕೆ, ದೈಹಿಕ ಬೆಳವಣಿಗೆಗೆ ಮಹತ್ವದ್ದಾಗಿದ್ದು ತಪ್ಪದೇ ನೀಡಬೇಕೆಂದರು.
ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಸ್ತನ್ಯಪಾನದ ಮಹತ್ವ ತಿಳಿಸಿ, ತಾಯಿ, ಮಗುವಿಗೆ ಮಡಿಲು ಕಿಟ್ ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಕಾರ್ಯದರ್ಶಿ ಆನಂದಜಲ, ಖಜಾಂಚಿ ಸವಿತಾ ಅನಿಲ್, ಸದಸ್ಯರಾದ ರಾಧ, ಶಿವಗಂಗಾ, ಮಧು, ಲಲಿತ, ಹಂಸ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್