ಧಾರವಾಡ: ಮಲಪ್ರಭಾ ಬಲದಂಡೆ ಕಾಲುವೆಯಡಿ ಬರುವ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವ ಸಲುವಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಮೇ 13ರಿಂದ ಮೇ 22ರವರೆಗೆ ನವಿಲುತೀರ್ಥ ಜಲಾಶಯದಿಂದ ನೀರನ್ನು ಮಲಪ್ರಭಾ ಬಲದಂಡೆ ಕಾಲುವೆ ಮುಖಾಂತರ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ನೀರಿನ ಸದ್ಬಳಕೆಗೆ ನಿಗಾವಹಿಸಲು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮತ್ತು ನರಗುಂದ ಹಾಗೂ ರೋಣ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ನರಗುಂದ ಶಾಖಾ ಕಾಲುವೆಗೆ ಪ್ರತಿದಿನ 700 ಕ್ಯೂಸೆಕ್ನಂತೆ 10 ದಿನಗಳವರೆಗೆ ಹಾಗೂ ಮಲಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 900 ಕ್ಯೂಸೆಕ್ನಂತೆ 10 ದಿನಗಳವರೆಗೆ, ಹೀಗೆ ಪ್ರತಿದಿನ ಒಟ್ಟು 1600 ಕ್ಯೂಸೆಕ್ನಂತೆ 10 ದಿನಗಳ ಅವಧಿಗೆ ಒಟ್ಟು 1.036 ಟಿಎಂಸಿ ನೀರನ್ನು ದಿನಾಂಕ 13-05-2025 ರಿಂದ 22-05-2025ರವರೆಗೆ ನವಿಲುತೀರ್ಥ ಜಲಾಶಯದಿಂದ ಬಿಡುಗಡೆಗೊಳಿಸಲು ಅಧೀಕ್ಷಕ ಅಭಿಯಂತರರು, ಕ.ನೀ.ನಿ.ನಿ ಎಂ.ಆರ್.ಬಿ.ಸಿ ಧಾರವಾಡ ಇವರಿಗೆ ಷರತ್ತಿಗೊಳಪಟ್ಟು ಆದೇಶಿಸಿದ್ದಾರೆ.
ಮಲಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಕೇವಲ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾರ್ವಜನಿಕರು, ರೈತರು ಈ ನೀರನ್ನು ಕೃಷಿ ಹಾಗೂ ಇನ್ನಿತರೆ ಬೇರೆ ಯಾವುದೇ ಉದ್ದೇಶಕ್ಕೆ ಪಂಪ್ ಸೆಟ್‍ನಿಂದ ಅಥವಾ ಇನ್ನಿತರ ಉಪಕರಣಗಳಿಂದ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕರು, ರೈತರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನಂತಿ ಮಾಡಿದ್ದಾರೆ.