ಕಾಳಗಿ :- ಬನಶಂಕರಿ ಲೇಔಟ್ ಲುಂಬಿನಿ ಬೃಂದಾವನದಲ್ಲಿ ಧಮ್ಮ ದಾನ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು,ದೀಪದ ಬೆಳಕು ಧಮ್ಮದ ಜ್ಞಾನ ಸಂಕೇತ. ಬುದ್ಧರಿಗೆ ಜ್ಞಾನೋದಯವಾದ ಮೇಲೆ ಮೊದಲ ಬಾರಿಗೆ ತನ್ನ ತವರೂರು ಕಪಿಲವಸ್ತುವಿಗೆ ಬುದ್ಧರು ಬರುವ ದಿನ ಗೌತಮಬುದ್ಧರ ತಂದೆ ಶುದ್ಧೋಧನ ರಾಜರು ಮತ್ತು ಸಾಮಾನ್ಯರೆಲ್ಲಾ ಅರಮನೆಯಿಂದ ಹಿಡಿದು ಇಡೀ ಕಪಿಲವಸ್ತುವಿನ ಪ್ರತಿಮನೆಯ ಮುಂದೆ ದೀಪ ಹಚ್ಚಿ ಜ್ಞಾನದ ಸಂಕೇತರಾದ ಬುದ್ಧರನ್ನು ಸ್ವಾಗತಿಸುವ ದಿನವೇ ದೀಪೋತ್ಸವ ದೀಪಾವಳಿ. ಮುಂದೆ ನಾಗಬೌದ್ಧ ದೊರೆ ಸಾಮ್ರಾಟ್ ಅಶೋಕರು ಧಮ್ಮಸ್ವೀಕರಿಸಿ 84000 ಬೌದ್ಧ ಸ್ತೂಪಗಳು ಕಲಾಕೃತಿಗಳನ್ನು ನಿರ್ಮಿಸಿ ಅಲಂಕರಿಸಿ ಸಂತೋಷವನ್ನು ಆಚರಿಸಲು ಸಂಪೂರ್ಣ ಸಾಮ್ರಾಜ್ಯವನ್ನು ದೀಪಗಳಿಂದ ಅಲಂಕರಿಸಿ ‘ಧಮ್ಮದೀಪ ದಾನೋತ್ಸವ’ ಆಚರಣೆ ಮಾಡಿದರು ಇದನ್ನೇ ಇಂದು ಜಗತ್ತಿನಾದ್ಯಂತ ಎಲ್ಲಾ ಬೌದ್ಧರಾಷ್ಟ್ರಗಳು ಸಂಭ್ರಮದಿಂದ ಆಚರಿಸುತ್ತವೆ.
ದೀಪಾವಳಿ ಎಂದರೆ ಯಾರನ್ನೋ ಮೋಸದಿಂದ ತುಳಿದು ಕೊಂದ ಸ್ಮರಣಾರ್ಥ ಸಂಭ್ರಮಿಸಿ ಪಟಾಕಿ ಸಿಡಿಸಿ ಗಾಳಿಗೆ ವಿಷಾನಿಲ ಬೆರೆಸಿ,ಇತರರಿಗೂ ಕಿರಿಕಿರಿ ಮಾಡಿ ಕಣ್ಣು ಕಳೆದುಕೊಂಡು ಜೀವಕಳೆಯುವುದಲ್ಲ.! ದೀಪಾವಳಿ ಎಂದರೆ
ದೀಪಾವಳಿ ಎಂದರೆ.-ಕತ್ತಲೆಯಿಂದ ಬೆಳಕಿನ ಕಡೆಗೆ ಅಜ್ಞಾನದಿಂದ ಸುಜ್ಞಾನದ ಕಡೆಗೆ,ಅಪ್ರಜ್ಞೆಯಿಂದ ಪ್ರಜ್ಞೆಯ ಕಡೆಗೆ,ಹಿಂಸೆಯಿಂದ ಅಹಿಂಸೆಯ ಕಡೆಗೆ,ಅಸತ್ಯದಿಂದ ಸತ್ಯದ ಕಡೆಗೆ,ದ್ವೇಷದಿಂದ ಪ್ರೀತಿಯ ಕಡೆಗೆ,ಕ್ರೌರ್ಯದಿಂದ ಕರುಣೆಯ ಕಡೆಗೆ,ಅಂತರ್ ಯುದ್ಧದಿಂದ ಶಾಂತಿಯ ಕಡೆಗೆ,ಅನ್ಯಾಯದಿಂದ ನ್ಯಾಯದ ಕಡೆಗೆ,ಮೌಢ್ಯದಿಂದ ಪ್ರಕೃತಿನಿಯಮದ ಕಡೆಗೆ, ಜಿಪುಣತನದಿಂದ ದಾನದ ಕಡೆಗೆ,ಒಡಕಿನಿಂದ ಮೈತ್ರಿಯ ಕಡೆಗೆ,
ಅಸಮಾನತೆಯಿಂದ ಸಮಾನತೆಯ ಕಡೆಗೆ, ಬಂಧನದಿಂದ ಬಿಡುಗಡೆಯ ಕಡೆಗೆ,ಅಸೂಯೆಯಿಂದ ಪರರ ಏಳ್ಗೆಯೆಡೆಗೆ,ಬಿರುಕಿನಿಂದ ಭ್ರಾತೃತ್ವದ ಕಡೆಗೆ,ಅನೈತಿಕತೆಯಿಂದ ನೈತಿಕತೆಯ ಕಡೆಗೆ,ಸ್ವಾರ್ಥದಿಂದ ನಿಸ್ವಾರ್ಥದ ಕಡೆಗೆ,ದುಃಖದಿಂದ ಸುಖದ ಕಡೆಗೆ ಸಾವಿನಿಂದ ಜೀವದ ಕಡೆಗೆ
ಮೃಗತ್ವದಿಂದ ಮಾನವೀತೆಯ ಕಡೆಗೆ ಸೋತು ಗೆಲ್ಲುವ ಗೆಲುವಿನೆಡೆಗೆ..
ನಮ್ಮ ನಮ್ಮ ಮನಸ್ಸನ್ನು ನಿರಾಳವಾಗಿ ಹೊರಳಿಸುವ, ಅನುಸರಿಸುವ, ಈ ಸರ್ವರ ಸುಖದ ಹಿತದ ಮಾರ್ಗವನ್ನು ಇತರರಿಗೂ ಹರಡುವ ಸಂಕೇತವಾಗಿ ದೀಪ ಹಚ್ಚುವದು, ಜ್ಞಾನ ಹರಡುವ ಸಂಭ್ರಮ..!
ಇದೇ ಧಮ್ಮ..! ಇದೇ ಬುದ್ಧಗುರುವು ತೋರಿದ ಅನಂತಧಮ್ಮಮಾರ್ಗ.! ಇದುವೇ ಬೌದ್ದಧಮ್ಮ..! ಇದೇ ಬಾಬಾಸಾಹೇಬರು ತೋರಿದ ಬುದ್ಧ ಮತ್ತು ಅವರ ಧಮ್ಮ. ಎಂದು ಸುಧಾಕರ್ ಬಿ ಸಾಲಹಳ್ಳಿ ಉಪಾಸಕ
ಮಾತನಾಡಿದರು.
ಈ ಸಂಧರ್ಭದಲ್ಲಿ,ಕಾಳಗಿ ಪಟ್ಟಣದ ಬೌದ್ಧ ಅನುಯಾಯಿಗಳಾದ, ಪರಮೇಶ್ವರ ಕಟ್ಟಿಮನಿ, ಚಂದ್ರಕಾಂತ್ ಕಾಳೆ, ಮಲ್ಲಿಕಾರ್ಜುನ್ ತೆಂಗಳಿ, ಶಿವಕುಮಾರ, ನಾಗಪ್ಪ ಬೀದಿಮನಿ, ಜಗದೇವಿ ದಿ.ಕತಲಪ್ಪ, ಬಾಬುರಾವ್ ಹಿರಾಪುರ್, ಮಾರುತಿ ಗಂಜಿಗಿರಿ, ದೇವೇಂದ್ರ ಇಂಕಲ್,ಪವನ್ ಕುಮಾರ್ ಸುಂಟನ, ಅಶೋಕ್, ಬೌದ್ಧ ಉಪಾಸಕ ಉಪಸಖಿಯರು ಹಾಗೂ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ : -ಹಣಮಂತ ಕುಡಹಳ್ಳಿ