ಬೆಂಗಳೂರು : “ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಎಚ್.ವೈ. ಮೇಟಿ ಅವರ ಎರಡನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
‘ನಾನು, ಮುಖ್ಯಮಂತ್ರಿಯವರು ಹಾಗೂ ಜಮೀರ್ ಅಹಮದ್, ನಾಸೀರ್ ಹುಸೇನ್, ಸಲೀಂ ಅಹ್ಮದ್, ಹುಸೇನ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದು ಶಾಮನೂರು ಅವರ ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಗ್ಗಟ್ಟಿನಿಂದ ಚುನಾವಣೆ ಮಾಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ತೀರ್ಮಾನ ಮಾಡಲಾಗಿದೆ” ಎಂದರು.
ನಾಳೆ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗಿ
“ಮಗನ ಬಿ ಫಾರಂ ಅನ್ನು ತಂದೆಯವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರ ಕೈಯಲ್ಲಿ ಕೊಡಲಾಗಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆಗೆ ನಾನು ಹಾಗೂ ಮುಖ್ಯಮಂತ್ರಿಯವರು ತೆರಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ.
ಟಿಕೆಟ್ ವಿಚಾರವಾಗಿ ಮಾಧ್ಯಮಗಳು ಮಾಡುತ್ತಿದ್ದ ವಿಭಿನ್ನ ಚರ್ಚೆಗಳಿಗೆ ತೆರೆ ಎಳೆಯಲಾಗಿದೆ. ಹೈಕಮಾಂಡ್ ಟಿಕೆಟ್ ಹಂಚಿಕೆ ಬಗ್ಗೆ ತಡರಾತ್ರಿ ತಿಳಿಸಿತು” ಎಂದರು.
“ಬುಧವಾರ ಶಾಸಕಾಂಗ ಪಕ್ಷದ ಸಭೆಯನ್ನು ನಿಗಧಿ ಮಾಡಲಾಗಿದೆ. ಎಐಸಿಸಿ ಕಾರ್ಯದರ್ಶಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ”ಎಂದರು.




