ನವದೆಹಲಿ: ಬಿಜೆಪಿ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ್ದು, ಇಂದು ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ರಾಜ್ಯದ ಸಚಿವರು, ಕಾಂಗ್ರೆಸ್ ಶಾಸಕರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಡಿಸಿಎಂ ಅವರನ್ನು ಭೇಟಿಯಾಗಿ ಕೆಲ ಕಾಲ ಸಮಾಲೋಚನೆ ನಡೆಸಿದರು. ಬಳಿಕ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಹಾರ ಸೇವಿಸಿದರು.
ಸಚಿವರಾದ ಆರ್ ಬಿ ತಿಮ್ಮಾಪುರ, ಮಾಂಕಾಳ ವೈದ್ಯ, ಮಾಜಿ ಸಚಿವ ತನ್ವಿರ್ ಸೇಠ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಪ್ರದೀಪ್ ಈಶ್ವರ್, ಆನೇಕಲ್ ಶಿವಣ್ಣ, ಎ ಸಿ ಶ್ರೀನಿವಾಸ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಎಂಎಲ್ಸಿಗಳಾದ ಪುಟ್ಟಣ್ಣ, ಮಂಜುನಾಥ್ ಭಂಡಾರಿ ಸೇರಿದಂತೆ ಹಲವರೊಂದಿಗೆ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಮತಗಳ್ಳತನದ ವಿರುದ್ಧ ಬೃಹತ್ ಜಾಗೃತಿ ಅಭಿಯಾನ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ನಡುವೆ ಡಿಸಿಎಂ ಹಾಗೂ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಕುತೂಹಲ ಮೂಡಿಸಿದೆ.




