ಬೆಂಗಳೂರು:- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಬಾಗಲಕೋಟೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು ಮತ್ತು ಮೂರನೇ ಬ್ಯಾಂಕ್ ಪಡೆದ ಮಂಡ್ಯದ ವಿದ್ಯಾರ್ಥಿಯನ್ನು ಸರ್ಕಾರದ ಪರವಾಗಿ ಸನ್ಮಾನಿಸಿದರು.
ವೈಯಕ್ತಿಕವಾಗಿ ಕ್ರಮವಾಗಿ ರೂ. 5 ಲಕ್ಷ ಮತ್ತು ರೂ. 2 ಲಕ್ಷ ನೀಡಿ ಡಿಕೆ ಶಿವಕುಮಾರ್ ಅವರು ಪ್ರೋತ್ಸಾಹಿಸುವ ಮೂಲಕ ಮಾದರಿ ಕಾರ್ಯವನ್ನು ಮಾಡಿದ್ದಾರೆ.ಇದೇ ವೇಳೆ ಅಂಕಿತಾಳ ಪೋಷಕರನ್ನೂ ಸನ್ಮಾನಿಸಿದರು. ಡಿಕೆ ಶಿವಕುಮಾರ್ ಅವರು ಆಕೆಯ ಪೋಷಕರನ್ನು ಸನ್ಮಾನಿಸುವಾಗ ಅಂಕಿತಾ ನನ್ನ ಪ್ರಿನ್ಸಿಪಾಲ್ ಸಹ ಬಂದಿದ್ದಾರೆ ಅನ್ನುತ್ತಾಳೆ.
ಆಕೆಯಲ್ಲಿದ್ದ ಭಾವನೆಯನ್ನು ಅರ್ಥಮಾಡಿಕೊಂಡ ಶಿವಕುಮಾರ್ ಪ್ರಿನ್ಸಿಪಾಲರನ್ನು ಕರೆದು ಅವರ ಮೇಲೂ ಶಾಲು ಹೊದಿಸಿ, ಹೂ ಹಾರ ಹಾಕಿ ಬೆನ್ನು ತಟ್ಟಿ ಅಭಿನಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಡಿಕೆ ಶಿವಕುಮಾರ್, SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ಕನ್ನಲಿ ಗ್ರಾಮದ ನವನೀತ್ ಅವರನ್ನು ಇಂದು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದೆ. ಹಾಗೆಯೇ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್‌ಗೆ 2 ಲಕ್ಷ ರೂ. ಚೆಕ್ ವಿತರಿಸಿದೆ ಎಂದಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ಈ ಇಬ್ಬರೂ ಮಕ್ಕಳು ನಿರೂಪಿಸಿದ್ದಾರೆ. ಮುಂದೆ ಕೂಡ ಇದೇ ರೀತಿ ಓದಿ ನಿಮ್ಮ ಶಾಲೆ, ಶಿಕ್ಷಕರು, ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದೆ ಎಂದು ಬರೆದಿದ್ದಾರೆ.
ವರದಿ ಶಿವಕುಮಾರ ಕೆಂಭಾವಿಹಿರೇಮಠ