ವಣಗೆರೆ: ‘ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಜನರ ಮೇಲೆ ಕೇಂದ್ರ ಸರ್ಕಾರ ಹೇರಿದ ಆರ್ಥಿಕ ಹೊರೆಯನ್ನು ಇಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಾಲ ಮಾಡಿದೆ.
ಜನಕಲ್ಯಾಣ ಯೋಜನೆಗಳನ್ನು ನೀಡದಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಾಲ ಮಾಡಿಲ್ಲವೇ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆಯ ಬಿಸಿಯಿಂದ ಪಾರು ಮಾಡಲು ರಾಜ್ಯ ಸರ್ಕಾರ ‘ಗ್ಯಾರಂಟಿ’ ಯೋಜನೆಗಳ ಮೂಲಕ ಜನರ ಕೈಗೆ ಹಣ ಕೊಡುತ್ತಿದೆ.
ಜನರ ಬಗ್ಗೆ ನೈಜ ಕಾಳಜಿ ಹೊಂದಿದ್ದರೆ ಕೇಂದ್ರ ಸರ್ಕಾರ ಕೂಡ ಇಂತಹದೊಂದು ಯೋಜನೆ ರೂಪಿಸಲಿ. ಜನರ ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ ₹ 10,000 ಆರ್ಥಿಕ ನೆರವು ನೀಡಲಿ’ ಎಂದರು.
‘ಬಿಜೆಪಿ ಖಾಲಿ ಮಾತುಗಳ ಮೂಲಕ ಜನರನ್ನು ಮರಳು ಮಾಡುತ್ತಿದೆ. ಅಕ್ಕಿಗೆ ಅರಿಶಿನ ಬೆರೆಸಿ ಅಯೋಧ್ಯೆಯಿಂದ ತಂದಿರುವಂತೆ ಬಿಂಬಿಸಿಕೊಂಡಿದೆ.
ಅಕ್ಕಿ ಹಾಗೂ ಅರಿಶಿನ ಬೆರೆಸಿದ ವಿಡಿಯೊಗಳು ನಮ್ಮ ಬಳಿ ಇನ್ನೂ ಹಾಗೆ ಇವೆ. ಅಕ್ಷತೆಯನ್ನು ಮನೆ-ಮನೆಗೆ ತಲುಪಿಸಿದ ರೀತಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ಏಕೆ ಪೂರೈಸಬಾರದು?’ ಎಂದು ಕುಟುಕಿದರು.
‘ನನ್ನೊಬ್ಬನಿಂದ ಅಥವಾ ಸಿದ್ದರಾಮಯ್ಯ ಅವರೊಬ್ಬರಿಂದ ರಾಜ್ಯ ಸರ್ಕಾರ ನಡೆಯುತ್ತಿಲ್ಲ. ಇಬ್ಬರು ಒಟ್ಟಿಗೆ ಶ್ರಮಿಸಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೇವೆ. ಉಪಚುನಾವಣೆಯಲ್ಲಿ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.
ನಮ್ಮೊಂದಿಗೆ ಪಕ್ಷದ ಕಾರ್ಯಕರ್ತರು, ಶಾಸಕರು ಹಾಗೂ ಸಚಿವರೂ ಇದ್ದಾರೆ. ನಾವು ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿಯ ಮೇಲೆ ರಾಜಕಾರಣ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.




