ಬೆಂಗಳೂರು : ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕಿದೆ. ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ, ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿ ನಿಗದಿಯಾದ ಮೇಲೆ ಜಿಬಿಎ ಚುನಾವಣೆಗೆ ತಯಾರಿ ನಡೆಸಿದರಾಯಿತು ಎಂದುಕೊಂಡರೆ ನೀವುಗಳು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ಸಹ ಎಲ್ಲಾ ನಿಗದಿಯಾದಾಗ ಮಾಡುತ್ತೇನೆ ಎಂದರೆ, ಈ ಡಿ.ಕೆ.ಶಿವಕುಮಾರ್ ನಿಮ್ಮನ್ನು ಗುರುತಿಸುವುದಿಲ್ಲ. ಇಂದಿನಿಂದ ಆಕಾಂಕ್ಷಿ ಅಭ್ಯರ್ಥಿಗಳ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ. ಈ ಹಣವು ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ, ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ರೂ. ಖರ್ಚಾಗಲಿದೆ.
ತಾಲೂಕು ಕಚೇರಿಗಳ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಲ್ಲವೇ? ಎಂಎಲ್ಎ ಚುನಾವಣೆ ವೇಳೆ 2 ಲಕ್ಷ ರೂ. ಹಣ ನಿಗದಿ ಮಾಡಲಾಗಿತ್ತು.
ಇದರಿಂದ 20 ಕೋಟಿ ರೂ. ಹಣ ಸಂಗ್ರಹವಾಯಿತು. ಇದರಿಂದ ಪಕ್ಷದ ಪರವಾಗಿ ಜಾಹೀರಾತು ನೀಡಲು ಸಾಧ್ಯವಾಯಿತು.
ಮಹಿಳೆಯರಿಗೆ ರಿಯಾಯಿತಿ ಇಲ್ಲ, ಒಂದು ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ತಿಳಿದಿದೆ ಎಂದು ಹೇಳಿದರು.ಇದೇ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರಿಗೆ 25 ಸಾವಿರ ಇರಲಿ ಎಂದರು.
ಆಗ ಡಿಸಿಎಂ ಶಿವಕುಮಾರ್ ಅವರು, ಸಿಎಂ ಹಾಗೂ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ ರೂಪಾಯಿ ನಿಗದಿ ಮಾಡಲಾಗುತ್ತಿದೆ.
ನಿಮ್ಮ ದುಡ್ಡು ನನಗೆ ಬೇಡ, ಮುಂದಿನ ಜನವರಿ 15ನೇ ತಾರೀಕಿನ ಒಳಗೆ ಅರ್ಜಿ ಹಾಕಬೇಕು. 369 ವಾರ್ಡ್ಗಳಿಂದ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ 10 ಮಂದಿ ಮಹಿಳೆಯರಾದರೂ ಅರ್ಜಿ ಸಲ್ಲಿಕೆ ಮಾಡಬೇಕು.
ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿರಬೇಕು. ಅಂತಹವರಿಗೆ ಪ್ರಾಮುಖ್ಯತೆ ನೀಡಲಾಗುವುದು. ಯಾರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ. ಸಿದ್ದರಾಮಯ್ಯ, ಶಿವಕುಮಾರ್ ಹಿಂದೆ ತಿರುಗಿದರೆ ಅವಕಾಶವಿಲ್ಲ. ಕೆಲಸ ಮಾಡಿದವರಿಗೆ ಹೆಚ್ಚು ಆದ್ಯತೆ ಎಂಬ ಸಂದೇಶವನ್ನು ಡಿಕೆಶಿ ತಿಳಿಸಿದರು.




