ಮಂಡ್ಯ : ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ತೆರಳಿದ್ದ ಡಿ.ಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯ ಗೌಡಹಳ್ಳಿಯ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಬರುತ್ತಿದ್ದ ವೇಳೆ ಬೆಂಗಾವಲು ವಾಹನ ಪಲ್ಟಿಯಾಗಿದೆ.
ಡಿಕೆ ಶಿವಕುಮಾರವರು ಮೈಸೂರಿನ ಸಾಧನಾ ಸಮಾವೇಶ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಎಸ್ಕಾರ್ಟ್ ವಾಹನವು ಡಿವೈಡರ್ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಿಂದ ಕಾರಿನಲ್ಲಿದ್ದ ಎಸ್ಕಾರ್ಟ್ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತಿದ್ದ ಡಿಕೆಶಿ ಕುಳಿತಿದ್ದ ಕಾರ್‌ಗೆ ಯಾವುದೇ ಅಪಾಯವಾಗಿಲ್ಲ. ಸಿಬ್ಬಂದಿ ಆಸ್ಪತ್ರೆಗೆ ದಾಖಲಾದ ನಂತರ ಡಿ.ಕೆ ಶಿವಕುಮಾರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.




