ಬಾಗಲಕೋಟೆ : ಕೆಲಸದ ಒತ್ತಡದ ನಡುವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೇ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಸಹಾಯಕ ನಿರ್ದೇಶಕ (ಗ್ರಾ.) ಮಹಾಂತೇಶ್ ಕೋಟಿ ತಿಳಿಸಿದರು.
ಹುನಗುಂದ ತಾಲ್ಲೂಕಿನ ಧನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇದ್ದಲಗಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಾನ್ಯ ಸಹಾಯಕ ನಿರ್ದೇಶಕರು ಚಾಲನೆ ನೀಡಿ ಮಾತನಾಡಿದ ಅವರು, ಕೂಲಿ ಕಾರ್ಮಿಕರರು ಕೆಲಸ ಮಾಡುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಇದರ ಸದುಪಯೋಗ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ನುರಿತ ವೈದ್ಯರ ತಂಡ ನಿಮ್ಮ ಬಳಿ ಬಂದಿದ್ದಾರೆ. ನಿರ್ಲಕ್ಷ್ಯ ಮಾಡದೇ ಆರೋಗ್ಯ ತಪಾಸಣೆ ಮಾಡಿಕೊಳ್ಳಿ, ಹೆಚ್ಚಿನ ಚಿಕಿತ್ಸೆಗೆ ಅವಶ್ಯವಿದ್ದರೇ ವೈದ್ಯರ ಚಿಕಿತ್ಸೆ ಸಲಹೆ ನೀಡುತ್ತಾರೆ. ಶುದ್ಧ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಸರುಸಾಬ್ ಮುಲ್ಲಾ ಮಾತನಾಡಿ, ನಾವು ನಿತ್ಯ ವಿಷಪೂರಿತ ಆಹಾರ ಸೇವನೆ ಮಾಡುತ್ತಾ ಇದ್ದೇವೆ. ತಾಂತ್ರಿಕ ಜಗತ್ತಿನಲ್ಲಿ ಆಹಾರ ಪೌಷ್ಟಿಕಾಂಶ ಕಡಿಮೆ ಆಗುತ್ತಾ ಬರುತ್ತಿದೆ. ಇದರಿಂದ ಆರೋಗ್ಯ ಮಟ್ಟ ಹದಗೆಡುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಸಾವಿನ ಬಾಗಿಲು ತಟ್ಟುತ್ತಿದ್ದೇವೆ ಎಂದು ತಿಳಿಸಿದರು. ಹೀಗಾಗಿ ಗ್ರಾಮೀಣ ಭಾಗದ ಜನರು ಹೆಚ್ಚು ಆರೋಗ್ಯ ಬಗ್ಗೆ ಗಮನಹರಿಸಿ ಎಂದು ತಿಳಿಸಿದರು. ಜೊತೆಗೆ ಸಮುದಾಯ ಕಾಮಗಾರಿ ಬಿಟ್ಟು ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳಿ ಎಂದು ಹೇಳಿದರು.
ಇನ್ನು ಗ್ರಾಮ ಪಂಚಾಯಿತಿ ಸದಸ್ಯ ಸಂಗಣ್ಣ ಆನೇಹೊಸೂರ ಮಾತನಾಡಿ, ಪ್ರಮಾಣಿಕತೆಯಿಂದ ಕೆಲಸ ಮಾಡಿ, ಸಮುದಾಯ ಕಾಮಗಾರಿ ಬಿಟ್ಟು, ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳಿ, ಇದರಿಂದ ಬಹಳ ಆರ್ಥಿಕವಾಗಿ ಸದೃಢರಾಗುತ್ತಿರಿ ಎಂದು ತಿಳಿಸಿದರು.
ಇನ್ನು ಐಸಿಟಿಸಿ ಆಪ್ತ ಸಮಾಲೋಚಕ ಪ್ರವೀಣ್ ಚೂರಿ ಮಾತನಾಡಿ, ಪ್ರತಿ ವರ್ಷ ಕೆಲಸದ ಸ್ಥಳದಲ್ಲಿ ಬಂದು ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಾ ಬಂದಿದ್ದೇವೆ. ಬಿಳಿ ಕಾಮನೆ, ಎಚ್ ಐವಿ,ಟಿಬಿ ಸೇರಿದಂತೆ ಹಲವು ತಪಾಸಣಾ ಮಾಡುತ್ತೇವೆ. ನಿಮ್ಮ ಬಳಿಯೇ ಬಂದಿರುವ ತಪಾಸಣಾ ಶಿಬಿರವನ್ನು ನಿರ್ಲಕ್ಷ್ಯ ವಹಿಸಿದೇ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಹಾಂತೇಶ್ ಕೋಟಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಪಂ ಉಪಾಧ್ಯಕ್ಷ ನಸರುಸಾಬ್ ಮುಲ್ಲಾ, ಗ್ರಾಪಂ ಕಾರ್ಯದರ್ಶಿ ಪರಶುರಾಮ ಭೀಮಣ್ಣವರ, ವೈದ್ಯಾಧಿಕಾರಿಗಳಾದ ಸಿದ್ದಮ್ಮ, ಗೀತಾ ಬಿಸಿಲದಿನ್ನಿ, ಮುತ್ತು ಗೌಡರ, ಗ್ರಾಪಂ ಸದಸ್ಯರಾದ ಶಶಿಕಾಂತ ತಿಮ್ಮಾಪುರ, ಸುವರ್ಣಾ ಮಠಪತಿ, ಸಂಗಣ್ಣ ಆನೇಹೊಸೂರ, ಪರಿಮಳಾ ಸುಣಕಲ್ಲ, ಡಾಟಾ ಎಂಟ್ರಿ ಆಪರೇಟರ್ ಸಿದ್ದಣ್ಣ, ಬಿಎಫ್ ಟಿ ಸಂಗಪ್ಪ ಮೇಲಿನಮನಿ, ಬ್ರಹ್ಮಲಿಂಗೇಶ್ ಅಂತರಗೊಂಡ, ಕಾಯಕಮಿತ್ರ ಆಸ್ಮಾಬೇಗಂ, ಜಿಪಂ ಆರೋಗ್ಯ ಇಲಾಖೆ ಸಿಬ್ಬಂದಿ, ತಾಪಂ ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ವ ಸದಸ್ಯರು,ಗ್ರಾಮಸ್ಥರು, ಕಾಯಕಬಂಧುಗಳು ಉಪಸ್ಥಿತರಿದ್ದರು.