ಕಲಘಟಗಿ : ಕ್ಷೇತ್ರದ ಅಭಿವೃದ್ಧಿಗಾಗಿ ಕಲಘಟಗಿ ತಾಲೂಕಿನ ಗ್ರಾಮಗಳ ಬಹು ಬೇಡಿಕೆಯ ಯೋಜನೆಗಳನ್ನು ಸಾಕಾರ ರೂಪಕ್ಕೆ ತರುತ್ತಿದ್ದೇವೆ. ಗುತ್ತಿಗೆದಾರರು ಹಾಗು ಇಲಾಖೆ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಕೈಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ತಾಲೂಕಿನ ಜಿ ಬಸವನಕೊಪ್ಪ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಅನುದಾನದಲ್ಲಿ ಜಿ ಬಸವನಕೊಪ್ಪದಿಂದ ಗಳಗಿಹುಲಕೊಪ್ಪ ರಸ್ತೆ ಸುಧಾರಣೆ, ಜಿ ಬಸವನಕೊಪ್ಪ ಮತ್ತು ನೀರಸಾಗರ ಗ್ರಾಮಗಳ ಮಧ್ಯೆ ಬಿ.ಸಿ.ಬಿ ನಿರ್ಮಾಣ ಕಾಮಗಾರಿ ಆರಂಭಿಸುತ್ತಿದ್ದೇವೆ. ಗ್ರಾಮಗಳ ಉನ್ನತಿಗಾಗಿ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರದಿಂದ ಮಾಡುತ್ತೇವೆ ಎಂದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ, ಗ್ರಾಮಗಳ ಅಭಿವೃದ್ಧಿ ಮುಖ್ಯವೇ ಹೊರತು ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ರಾಜಕೀಯ ಬೇಡ. ಜನ ನಮ್ಮ ಸರ್ಕಾರವನ್ನು ಆರಿಸಿ ತಂದಿದ್ದಾರೆ, ನಾವು ಜನರ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ, ನರೇಶ ಮಲೆನಾಡು, ಗುರು ಬೆಂಗೇರಿ, ಎಸ್ ವಿ ತಡಸಮಠ, ಸೋಮಶೇಖರ ಬೆನ್ನೂರ, ಸಂತೋಷ ಮಾದನಭಾವಿ, ಪಿಡಿಓ ಸಂತೋಷ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.




