ಕಲಬುರ್ಗಿ: ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಅನಾಹುತವೇ ನಡೆದು ಹೋಗಿದೆ. ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡುವ ವೇಳೆ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಭಾಗ್ಯಶ್ರೀ ಎಂಬ ಮಹಿಳೆಗೆ ಫೆಬ್ರವರಿ 5 ರಂದು ಸಿಸೇರಿಯನ್ ಡೆಲಿವರಿ ಆಗಿತ್ತು.ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಹೊಟೆಯಲ್ಲೇ ಬಟ್ಟೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ.
ಆದ್ರೆ ಇದು ವೈದ್ಯರ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ಕ್ಯಾನಿಂಗ್ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಕುಟುಂಬಸ್ಥರು ಅಫಜಲಪುರ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ತೆರಳಿ ವೈದ್ಯರಿಂದ ಮರು ಶಸ್ತ್ರಚಿಕಿತ್ಸೆ ಮಾಡಿಸಿ ಬಟ್ಟೆ ಮತ್ತು ಹತ್ತಿಯನ್ನು ಹೊರತೆಗೆದಿದ್ದಾರೆ.
ಈ ಬಗ್ಗೆ ಜಿಲ್ಲಾ ಸರ್ಜನ್ ಡಾ. ಅಸ್ನಾ ಬೇಗ್, ಅಂಥದ್ದೇನಿಲ್ಲ ಹೆರಿಗೆಯ ನಂತರ ರಕ್ತ ಸ್ರಾವ ಸಲುವಾಗಿ ಕಾಟನ್ ಪ್ಯಾಡ್ ಇಡಲಾಗಿದೆ. 2 ದಿನದ ನಂತರ ಮಹಿಳೆ ಬಂದು ಅದನ್ನ ತೆಗೆಸಿಕೊಳ್ಳಬೇಕಾಗಿತ್ತು.
ಆದ್ರೆ ಅವರು ಬಂದಿರಲಿಲ್ಲ. ಸದ್ಯ ಈಗ ಮಹಿಳೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ವೈದ್ಯರ ಬೇಜವಾಬ್ದಾರಿಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ.




