ತುರುವೇಕೆರೆ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿಯಾಗಿದೆ. ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಆಟದಲ್ಲಿ ಪಾಲ್ಗೊಳ್ಳಬೇಕು. ಸೋಲಿಗೆ ಕುಗ್ಗಬಾರದು ಹಾಗೂ ಗೆಲ್ಲುವ ಛಲವನ್ನು ಬಿಡಬಾರದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿವಿಮಾತು ಹೇಳಿದರು.
ಪಟ್ಟಣದ ವಿಶ್ವವಿಜಯ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆ ಬಹಳ ಅವಶ್ಯಕವಾಗಿ ಬೇಕಿದೆ. ಶಿಕ್ಷಣದಿಂದ ಮಕ್ಕಳ ಬೌದ್ದಿಕ ಮಟ್ಟ ಸುಧಾರಣೆಯಾದರೆ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು, ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಸಾಧಕರನ್ನಾಗಿ ಮಾಡುವ ಬಗ್ಗೆ ಚಿಂತಿಸಬೇಕೆಂದರು.
ಗ್ರಾಮೀಣ ಪ್ರದೇಶದ ಪ್ರತಿಭಾವಂತರೇ ಇಂದು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಸಾಧಕರಾಗಿ ದೇಶದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಈ ಸಾಲಿನಲ್ಲಿ ನಮ್ಮ ತಾಲ್ಲೂಕಿನ ಮಕ್ಕಳೂ ಸೇರಬೇಕೆಂಬುದು ನಮ್ಮ ಆಶಯವಾಗಿದೆ ಎಂದ ಅವರು, ವಿಶ್ವವಿಜಯ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ವಿಶೇಷವಾಗಿ ಆಲೋಚಿಸಿ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಕಲೆಯನ್ನು ಹೊತರುವುದಕ್ಕಾಗಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಇನ್ನಿತರ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ವತಿಯಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ವಿಶ್ವವಿಜಯ ವಿದ್ಯಾಶಾಲೆಯ ಅಧ್ಯಕ್ಷ ಪ್ರವೀಣ್ ಗೌಡ, ಸಂಸ್ಥಾಪಕ ಕಾರ್ಯದರ್ಶಿ, ಪ್ರಾಂಶುಪಾಲೆ ವಿಜಯಲಕ್ಷ್ಮೀ ವಿಶ್ವೇಶ್ವರಯ್ಯ, ಪಪಂ ಮಾಜಿ ಸದಸ್ಯರಾದ ಎನ್.ಆರ್.ಸುರೇಶ್, ಆರ್.ಮಧು ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ವರ್ಗ, ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




