ಬೆಂಗಳೂರು : ಬಿಜೆಪಿಯಿಂದ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ್ದನ್ನು ಈಗಾಗಲೇ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ವಿರೋಧಿಸಿ ಉಚ್ಚಾಟನೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಅಲ್ಲದೇ ಯತ್ನಾಳ್ ಅವರನ್ನು ಬೆಂಬಲಿಸಿ ನಾಳೆ (ಏ.6) ಸ್ವಾಮೀಜಿಯವರು ಹಿಂದೂ ಪರ ಸಂಘಟನೆಗಳ ಜೊತೆ ಸೇರಿ ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದಿರುವ ವಿಚಾರಕ್ಕೆ ಇದೀಗ ಸ್ವತಃ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವಿರೋಧಿಸಿದೆ.
ಸ್ವಾಮಿಗಳು ಯತ್ನಾಳ್ ಪರ ಯಾವ ಹೋರಾಟವನ್ನೂ ಮಾಡಬಾರದು. ವೈಯಕ್ತಿಕ ಹಿತಾಸಕ್ತಿಯಿಂದ ಯತ್ನಾಳ್ ಪರವಾಗಿ ಹೇಳಿಕೆ ಕೊಡುವುದು ತಪ್ಪು. ಸ್ವಾಮಿಗಳು ಜಾತಿ, ಒಳಪಂಗಡಗಳಿಗಾಗಿ ಕೆಲಸ ಮಾಡಬೇಕು. ಅವರ ಉದ್ದೇಶ ಸಮಾಜ ಸಂಘಟನೆಗಾಗಿ ಇರಬೇಕು.
ಸಮಾಜದಲ್ಲಿನ ಜನರನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲಕ್ಕೆ ಎತ್ತಲು ಸ್ವಾಮೀಜಿಗಳನ್ನು ನೇಮಕ ಮಾಡಿರುತ್ತಾರೆ. ಹೀಗಿರುವಾಗ ಸ್ವಾಮೀಜಿಗಳು ಯಾವ ಸಂದರ್ಭದಲ್ಲೂ ವ್ಯಕ್ತಿ, ರಾಜಕೀಯ ಪಕ್ಷದ ಸ್ವತ್ತು ಆಗಬಾರದು ಎಂದು ಪಂಚಮಸಾಲಿ ಸಮಾಜದ ಮುಖಂಡ ಮೋಹನ ಲಿಂಬಿಕಾಯಿ ಅಸಮಾಧಾನ ಹೊರಹಾಕಿದ್ದಾರೆ.