ತುರುವೇಕೆರೆ: ಮಕ್ಕಳ ಪರಿಪೂರ್ಣ ಯಶಸ್ಸಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಂಗಳೂರಿನ ಆರ್ಥೋಫಿಡಿಕ್ ಸರ್ಜನ್ ಡಾ.ಎಸ್.ಸಿ.ಬೋಸ್ ತಿಳಿಸಿದರು.
ಪಟ್ಟಣದ ವಿಶ್ವವಿಜಯ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯಿಂದ ಬೌದ್ದಿಕ ಮಟ್ಟ ಸುಧಾರಣೆಯಾದರೆ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳಲ್ಲಿ ಅಂಕ ಗಳಿಕೆಗೆ ಮಾತ್ರ ಒತ್ತಡ ಹೇರದೆ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಮಕ್ಕಳಿಗೆ ತಮ್ಮ ಆಸಕ್ತಿಯ ವಿಷಯದ ಜೊತೆಗೆ ಶಿಕ್ಷಣದ ಬಗ್ಗೆಯೂ ಗಮನ ಕೇಂದ್ರೀಕೃತವಾಗಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ. ವಿಶ್ವವಿಜಯ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ವಿಶೇಷವಾಗಿ ಆಲೋಚಿಸಿ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಕಲೆಯನ್ನು ಹೊತರುವುದಕ್ಕಾಗಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಇನ್ನಿತರ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೈದ್ಯ ಡಾ.ಎ.ನಾಗರಾಜ್ ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಸರಿಯಾದ ರೀರಿಯಲ್ಲಾಗಬೇಕಾದರೆ ಮಕ್ಕಳು ದಿನಕ್ಕೆ 8 ಗಂಟೆ ನಿದ್ದೆ ಮಾಡಬೇಕು ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಪ್ರತಿನಿತ್ಯ ಒಂದು ಗಂಟೆ ಯಾವುದೇ ರೀತಿಯ ಆಟಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಕ್ಕಳ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುವುದಲ್ಲದೆ ಅಧ್ಯಯನ ಮಾಡಲು ಏಕಾಗ್ರತೆಗೆ ಬಹಳ ನೆರವಾಗುತ್ತದೆ. ಮಕ್ಕಳಿಗೆ ಜಂಕ್ ಫುಡ್ ತಿನ್ನಿಸುವುದರಿಂದ ಪೌಷ್ಟಿಕಾಂಶ ದೊರೆಯುವುದಿಲ್ಲ ಎಂಬುದನ್ನು ಪೋಷಕರು ಮನಗಾಣಬೇಕು ಎಂದರು.
ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜೆ.ಪಿ. ಆಂಗ್ಲಶಾಲೆಯ ಅಧ್ಯಕ್ಷ ಪ್ರಕಾಶ್ ಗುಪ್ತ, ವಿಶ್ವವಿಜಯ ವಿದ್ಯಾಶಾಲೆಯ ಅಧ್ಯಕ್ಷ ಪ್ರವೀಣ್ ಗೌಡ, ಪ್ರಾಂಶುಪಾಲೆ ವಿಜಯಲಕ್ಷ್ಮೀ, ಲಯನ್ಸ್ ಅಧ್ಯಕ್ಷ ರಂಗನಾಥ್, ಬಿ.ಆರ್.ಸಿ ಸುರೇಶ್, ಶಾಲೆಯ ಆಡಳಿತಾಧಿಕಾರಿ ಪ್ರಶಾಂತ್ ರೆಡ್ಡಿ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ವರ್ಗ, ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್