ಸಿರುಗುಪ್ಪ : ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಯ ಸಭಾಂಗಣದಲ್ಲಿ ನಡೆದ ಏಪ್ರಿಲ್ 5ರಂದು ಜರುಗುವ ಬಾಬು ಜಗಜೀವನ್‌ರಾಮ್ ಹಾಗೂ ಏಪ್ರಿಲ್ 14ರಂದು ಜರುಗುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಸಂಭ್ರಮಾಚರಣೆಯ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮಾತನಾಡಿ ಈ ಸಲ ಯಾವುದೇ ಚುನಾವಣೆ ನೀತಿ ಸಂಹಿತೆ ಇಲ್ಲದ ಕಾರಣ ನಮ್ಮ ದೇಶದ ಏಳ್ಗೆಗೆ ಶ್ರಮಿಸಿರುವ ಮಹನೀಯರ ಜಯಂತಿಯನ್ನು ಸಂಭ್ರಮದಿಂದ ಆಚರಿಸೋಣವೆಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಡಾ.ಕೊಡ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತಕ್ಕೆ ಸಂವಿಧಾನವನ್ನು ನೀಡಿರುವ ಅಂಬೇಡ್ಕರರು ಎಲ್ಲಾ ಸಮಾಜಕ್ಕೆ ಆದರ್ಶನೀಯ ವ್ಯಕ್ತಿಯಾಗಿದ್ದಾರೆ. ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸೋಣವೆಂದರು.
ಬಾಬು ಜಗಜೀವನ್ ರಾಮ್ ಸಂಘದ ಗೌರವಾಧ್ಯಕ್ಷ ಚಿಕ್ಕಬಳ್ಳಾರಿ ನಾಗಪ್ಪ ಅವರು ಮಾತನಾಡಿ ಎರಡು ಜಯಂತಿಗಳು ಸ್ವಲ್ಪ ಅಂತರದಲ್ಲೇ ಇರುವುದರಿಂದ ಒಂದೇ ದಿನ ಅಂದರೆ ಬಾಬಾ ಸಾಹೇಬ್ ಅಂಬೇಡ್ಕರರ ಜಯಂತಿಯ ದಿನದಂದು ಎರಡು ಜಯಂತಿ ಆಚರಿಸುವ ಬಗ್ಗೆ ತಾಲೂಕಾಡಳಿದಿಂದ ನಿರ್ಧರಿಸಲಾಗಿದೆ.
ಆದ್ದರಿಂದ ಮೆರವಣಿಗೆಯ ಜತೆಗೆ ಇಬ್ಬರು ಮಹನೀಯರ ತ್ಯಾಗ, ಅವರು ಹಾಕಿಕೊಟ್ಟ ಮಾರ್ಗದರ್ಶನಗಳನ್ನು ತಿಳಿಸುವಂತಹ ಪ್ರಯತ್ನ ಮಾಡಬೇಕೆಂದರು.
ವಕೀಲರಾದ ಮುನಿಸ್ವಾಮಿ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರರ ಜಯಂತಿಯ ದಿನದಂದು ಎಲ್ಲಾ ಸರ್ಕಾರಿ ನೌಕರರು ಹಾಗೂ ಪರಿಶಿಷ್ಟ ವಸತಿ ನಿಲಯಗಳಲ್ಲಿನ ಪದವೀಧರ ವಿದ್ಯಾರ್ಥಿಗಳನ್ನು ಭಾಗಿಯಾಗಲು ಅನುವು ಮಾಡಿ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯು ದೊರೆಯುವಂತಾಗಬೇಕೆಂದು ಅಭಿಮತ ವ್ಯಕ್ತಪಡಿಸಿದರು.
ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪವನ್‌ಕುಮಾರ್.ದಂಡಪ್ಪನವರ್, ನಗರಸಭೆ ಪೌರಾಯುಕ್ತ ಹೆಚ್.ಎನ್.ಗುರುಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-2 ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಪರಿಶಿಷ್ಟ ಪಂಗಡ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಮ, ಚಲವಾದಿ ಮಹಾಸಭಾದ ತಾಲೂಕಾಧ್ಯಕ್ಷ ಬಿ.ಸಣ್ಣರಾಮಯ್ಯ, ಬೋವಿ ಸಮಾಜದ ವಿ.ಗಾಳೆಪ್ಪ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ